ಚನ್ನಮ್ಮನ ಕಿತ್ತೂರು : ಗಾಂಧಿಜೀ ಹತ್ಯೆಯ ಬಳಿಕ ಅವರ ಚಿತಾಭಸ್ಮವನ್ನು ಸ್ವಾತಂತ್ರ್ಯ ಸೇನಾನಿಗಳ ತವರೂರಾಗಿರುವ ತಿಗಡೊಳ್ಳಿ ಗ್ರಾಮಕ್ಕೆ ತಂದು ಅದರ ಮೇಲೊಂದು ಅರಳಿಗಿಡ ನೆಡಲಾಯಿತು ಎಂದು ಶಿಕ್ಷಕ ಮಂಜುನಾಥ ಕಳಸಣ್ಣವರ ಹೇಳಿದರು.
ಸಮೀಪದ ತಿಗಡೊಳ್ಳಿ ಗ್ರಾಮದ ಹೊರವಲಯದ ಕ್ಯಾತನವರ ಜಮೀನಿನಲ್ಲಿ ಇರುವ ಗಾಂಧಿ ಗಿಡದ ನೆರಳಿನಲ್ಲಿ ಗಾಂಧಿ ಸೇವಾ ಸಮಿತಿ, ಗ್ರಾಮ ಪಂಚಾಯತಿ ಸಹಯೋಗದಲ್ಲಿ ಏರ್ಪಡಿಸಿದ ಗಾಂಧಿ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಜಾನಪದ ವಿದ್ವಾಂಸ ದಿವಂಗತ ಬಸವರಾಜ ಮಲಶೆಟ್ಟಿ ಅವರು ಸುಮಾರು ರೂ. 80 ಸಾವಿರ ವೆಚ್ಚದಲ್ಲಿ ಗಾಂಧಿಗಿಡದ ಆವರಣವನ್ನು ನವೀಕರಣ ಮಾಡಿದ್ದರು. ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡ ಊರಿನ ಸ್ವಾತಂತ್ರ್ಯ ಸೇನಾನಿಗಳ ನಾಮಫಲಕವನ್ನು ನಿರ್ಮಿಸಿದ್ದರು. ಈ ಪ್ರದೇಶವನ್ನು ‘ಗಾಂಧಿಮರಡಿ’ ಎಂದೇ ಊರವರು ಕರೆಯುತ್ತ ಬಂದಿದ್ದಾರೆ’ ಎಂದರು.
ಗ್ರಾಂಧೀಜಿ ಕುರಿತು ತಿಗಡೊಳ್ಳಿ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಗಾಂಧಿ ಜೀವನ ಚರಿತ್ರೆ, ಪ್ರಮಾಣಪತ್ರ ಮತ್ತು ಕಾಣಿಕೆ ನೀಡಿ ಗೌರವಿಸಲಾಯಿತು.
Kshetra Samachara
30/01/2025 07:04 pm