ಶಿವಮೊಗ್ಗ : ನಗರ ಸಂಚಾರ ಪಿಎಸ್ಐ ಅವರ ವರ್ತನೆ ವಿರೋಧಿಸಿ ವಾಹನಗಳ ಚಾಲಕರು ಮತ್ತು ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರ್ಕಶ ಹಾರ್ನ್ ಹೊಂದಿರುವ ವಾಹನಗಳಿಂದ ತಡೆದು ಪರಿಶೀಲಿಸುವ ನೆಪದಲ್ಲಿ ಚಾಲಕರನ್ನು ಏಕವಚನದಿಂದ ಇಳಿಯೋ, ಬಾರೋ, ಕೆಳಗೆ ಬಗ್ಗೋ ಎಂದು ಹೀನಾಯ ಪದಗಳನ್ನು ಆಡುತ್ತಾ ಚಾಲಕರ ಕೊರಳಪಟ್ಟಿ ವಾಹನದಲ್ಲಿ ಹಾರ್ನ್ ಸೌಂಡ್ ಬರುವ ಜಾಗಕ್ಕೆ ಕೂರಿಸಿ ಕೇಳೋ ಸೌಂಡ್ ಎಂದು ದುರ್ವರ್ತನೆ ತೋರಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಕರ್ಕಶ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಮಾಲೀಕರನ್ನು ಕರೆಸಿ ತಿಳಿವಳಿಕೆ ನೀಡಬೇಕು ಅಥವಾ ದಂಡ ಹಾಕಬೇಕು. ಆದರೆ ಅದನ್ನು ಬಿಟ್ಟು ಚಾಲಕರ ಕೊರಳಪಟ್ಟಿ ಹಿಡಿದು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಈ ರೀತಿ ಅವಮಾನ ಮಾಡಿದ ಫೋಟೋಗಳು ನಮ್ಮ ಬಳಿ ಇವೆ. ಆದ್ದರಿಂದ ಕೀಳು ಭಾವನೆಯಿಂದ ಚಾಲಕರನ್ನು ಕಂಡು ದುರ್ವರ್ತನೆ ತೋರಿದ ಪಿಎಸ್ಐ ತಿರುಮಲೇಶ್ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಇನ್ನು ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೂಡ ಭಾಗಿಯಾಗಿ ಈ ಬಗ್ಗೆ ಎಸ್ಪಿ ಜೊತೆ ಮಾತನಾಡುತ್ತೇನೆ ಎಂದರು.
PublicNext
30/01/2025 06:05 pm