ನವಲಗುಂದ: ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿರುವ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಆವರಣದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಪತ್ರಿಕಾ ವಿತರಕರ ಸಂಘದಿಂದ ಇಂಡಿಯನ್ ನ್ಯೂಸ್ ಪೇಪರ್ ದಿನಾಚರಣೆಯನ್ನು ಸಸಿ ನಡೆಸುವ ಮೂಲಕ ಆಚರಿಸಲಾಯಿತು.
ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ವಿತರಕರ ಸಂಘದ ಅಧ್ಯಕ್ಷ ಶರೀಪಸಾಬ ಸುಂಕದ ಮಾತನಾಡಿ 1780 ಜನವರಿ 29ರಂದು ಭಾರತದ ಮೊದಲ ವೃತ್ತಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ ಪ್ರಕಟಗೊಂಡಿತ್ತು. ಭಾರತದ ಮೊದಲ ಸುದ್ದಿಪತ್ರಿಕೆಯಾದ ಬೆಂಗಾಲ್ ಗೆಜೆಟ್ ಪತ್ರಿಕೆಯನ್ನು ಜೇಮ್ಸ್ ಆಗಸ್ಟಸ್ ಹಿಕ್ಕಿ ಆರಂಭಿಸಿದನು. ಈ ಸುದ್ದಿ ಪತ್ರಿಕೆಯನ್ನು ಹಿಕ್ಕಿ ಗೆಜೆಟ್ ಅಥವಾ ದಿ ಕಲ್ಕತ್ತಾ ಜನರಲ್ ಅಡ್ವರ್ಟೈಸರ್ ಎಂದೂ ಕರೆಯಲಾಗುತ್ತದೆ. ಮೊದಲ ಪತ್ರಿಕೆ ಆರಂಭಿಸಿದ ಹಿಕ್ಕಿಯನ್ನೇ ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗಿದೆ. ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಸಮನ್ಸ್ ಪ್ರಕಾರ, ಮೊದಲ ಪತ್ರಿಕೆ ಆರಂಭವಾದ ದಿನವನ್ನು ಪ್ರತಿ ವರ್ಷ ಜನವರಿ 29 ರಂದು ಆಚರಿಸಲಾಗುತ್ತದೆ ಎಂದರು.
ನವಲಗುಂದ ತಾಲ್ಲೂಕಾ ಅಧ್ಯಕ್ಷ ದೇವರಾಜಸ್ವಾಮಿ ಹಿರೇಮಠ ಮಾತನಾಡಿ ಸಮಾಜವನ್ನು ಜಾಗೃತಗೊಳಿಸುವಲ್ಲಿ ಗಣನೀಯ ಕೊಡುಗೆ ನೀಡಿದ ಎಲ್ಲ ಪತ್ರಕರ್ತರನ್ನು ನೆನಪಿಸಲಾಗುತ್ತದೆ. ಭಾರತೀಯ ವೃತ್ತಪತ್ರಿಕೆ ದಿನವು ಮುದ್ರಣ ಮಾಧ್ಯಮ ಕ್ಷೇತ್ರವನ್ನು ಗೌರವಿಸುವ ದಿನವಾಗಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡಿ ಜನರನ್ನು ಜಾಗೃತರನ್ನಾಗಿಸಿದ್ದು ಮಾತ್ರವಲ್ಲದೇ, ಸಬಲರನ್ನಾಗಿ ಮಾಡಿದೆ ಎಂದರು.
ನಗರ ಘಟಕದ ಅಧ್ಯಕ್ಷ ಬಾಬಾಜಾನ ಶಿರಕೊಳ, ರಾಜು ಕುಂಬಾರ, ವೀರಣ್ಣ ಶಿರಸನಾಳ, ಅಬ್ದುಲರಜಾಕ ನದಾಫ, ಧರ್ಮರಾಜ ಗುಳೇದ, ಸಿದ್ದಲಿಂಗೇಶ ಶಿರಕೋಳ, ಶಿವು ನಾಯ್ಕ, ಸಂಜಯ್ ಗುರಿಕಾರ, ಗಂಗಾಧರ ಕತ್ತಿ, ಸಂತೋಷ ಹೆಬ್ಬಾಳ, ಶಿವಾನಂದ ಭಂಗಿ ಇತರರು ಉಪಸ್ಥಿತರಿದ್ದರು.
Kshetra Samachara
30/01/2025 12:11 pm