ಚಾಮರಾಜನಗರ : ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವುದು ಹಾಗೂ ಆನ್ಲೈನ್ ರಮ್ಮಿ ಮತ್ತು ಗೇಮ್ ಗಳನ್ನು ರಾಜ್ಯದಲ್ಲಿ ನಿಷೇಧ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇಗುಲದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ-209 ಹಾದು ಹೋಗಿರುವ ಶ್ರೀ ಭುವನೇಶ್ವರಿ ವೃತ್ತ ತಲುಪಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ತೆರಳಿ ಜಿಲ್ಲಾಡಳಿತ ಭವನ ತಲುಪಿ, ಅಲ್ಲಿಯೂ ಕೂಡ ಕೆಲಕಾಲ ಪ್ರತಿಭಟನೆ ನಡೆಸಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಯುವಕರು, ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ನವರ ಹಾವಳಿಯಿಂದ ಜನರು ಗ್ರಾಮವನ್ನು ತೆರೆದು ಬೇರೆ ಗ್ರಾಮಗಳ ಮುಖ ಮಾಡಿದ್ದಾರೆ. ಸಾಲ ವಸೂಲಾತಿಯ ಸಂದರ್ಭದಲ್ಲಿ ಜನರ ಮೇಲೆ ದಬ್ಬಾಳಿಕೆ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿಗೆ ಐದಾರು ಸಾಲಗಳನ್ನು ನೀಡಿ ಅವರನ್ನು ಸಾಲದ ಸೂಲಕ್ಕೆ ಸಿಲುಕಿಸುತ್ತಿದ್ದಾರೆ. ಅವರು ಸಾಲ ವಸೂಲಾತಿಗಳಲ್ಲಿ ವಿಚಾರದಲ್ಲಿ ನಿಯಮ ಮೀರಿ ವರ್ತಿಸುತ್ತಿದ್ದಾರೆ. ಇದರಿಂದ ಸಾಲ ಪಡೆದವರ ಗೌರವ ಮತ್ತು ಘನತೆಗೆ ಕುಂದು ಉಂಟಾಗಿ, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಮನನೊಂದು ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವ ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಮೈಕ್ರೋ ಫೈನಾನ್ಸ್ ಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಪ್ರತಿಭನಾಕಾರರು ಆಗ್ರಹಿಸಿದರು.
PublicNext
28/01/2025 01:58 pm