ಹುಬ್ಬಳ್ಳಿ: ಆತ ಎರಡು ಮಕ್ಕಳ ತಂದೆ ತಾನಾಯಿತು ತನ್ನ ವ್ಯವಹಾರ ಆಯಿತು ಅಂತಾ ಮಾಡಿಕೊಂಡಿದ್ದ ವ್ಯಕ್ತಿ. ಏನಾದ್ರು ಉದ್ಯೋಗ ಮಾಡಿ ಹಣ ಮಾಡಿ ಹೆಂಡತಿ ಮಕ್ಕಳನ್ನು ಖುಷಿಯಾಗಿ ಇಡಬೇಕು ಅಂತಾ ಕನಸು ಕಂಡಿದ್ದ. ಆದ್ರೆ ಅದೇ ವ್ಯವಹಾರ ಇದೀಗ ಆತನ ಬದುಕಿಗೆ ಮುಳುವಾಗಿದೆ. ವ್ಯವಹಾರ ಮಾಡಲು ಹಾಕಿದ ಹಣಕ್ಕೆ ಬಡ್ಡಿ ಕಟ್ಟಿ ಕಟ್ಟಿ ಇದರಿಂದ ಮುಕ್ತಿಯೇ ಸಿಗಲ್ಲ ಎಂದು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿ ಪ್ರಾಣ ಬಿಟ್ಟಿದ್ದಾನೆ.
ಒಂದೆಡೆ ಪೊಲೀಸ್ ಠಾಣೆ ಮುಂದೆ ನಿಂತು ನಮಗೆ ನ್ಯಾಯ ಕೊಡಿಸಿ ಅಂತಾ ಕಮಿಷನರ್ ಮುಂದೆ ಕೈ ಬೇಡುತ್ತಿರೋ ಸಂಬಂಧಿಕರು. ಇನ್ನೊಂದೆಡೆ ಜೊತೆಗಿದ್ದ ಸ್ನೇಹಿತನ ಕಳೆದುಕೊಂಡ ಸ್ನೇಹ ಬಳಗ. ಇದಕ್ಕೆಲ್ಲ ಕಾರಣವಾಗಿದ್ದು ಸಿದ್ದು ಎಂಬಾತನ ಸಾವು. ಈತ ಹುಬ್ಬಳ್ಳಿಯ ಉಣಕಲ್ ನಿವಾಸಿ. ಈತ ಕಳೆದ ಕೆಲವು ವರ್ಷಗಳ ಹಿಂದೆ ವ್ಯವಹಾರ ಮಾಡುವ ಉದ್ದೇಶದಿಂದ ಮಹೇಶ್ ಎಂಬುವರ ಬಳಿ ಸಾಲವನ್ನು ಮಾಡಿದ್ದ. ಆದ್ರೆ ಅದಕ್ಕೆ ಬಡ್ಡಿಯ ರೂಪದಲ್ಲಿ 65 ಲಕ್ಷ ರೂಪಾಯಿ ಬಡ್ಡಿ ಕಟ್ಟಿ ಕಟ್ಟಿ ಸೋತು ಹೋಗಿದ್ದ. ಹೀಗಾಗಿ ಕಳೆದ ಕೆಲವು ತಿಂಗಳಿನಿಂದ ಬಡ್ಡಿ ಕಟ್ಟಲು ಆಗಿರಲಿಲ್ಲ. ಈ ನಡುವೆ ಮಹೇಶ್ ಬಡ್ಡಿ ಕೊಡು ಅಂತಾ ಸಿದ್ದುವಿಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ. ಸಿದ್ದು ಡೆತ್ ನೋಟ್ ಬರೆದಿಟ್ಟು ಲಾರಿ ಚಕ್ರಕ್ಕೆ ತನ್ನ ಪ್ರಾಣವನ್ನು ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾರೆ ಮೃತ ಸಿದ್ದುವಿನ ಹೆಂಡತಿ.
ನಿನ್ನೆ ರಾತ್ರಿ ಹತ್ತು ಗಂಟೆಯವರೆಗೂ ಮನೆಯವರ ಜೊತೆ ಮಾತನಾಡಿದ್ದ ಸಿದ್ದು ನಂತರ ಡೆತ್ ನೋಟ್ಅನ್ನು ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಆತನ ಸ್ನೇಹಿತರು ಸ್ಟೇಟಸ್ ನೋಡಿ ಆತನ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಗೆಳೆಯನಿಗಾಗಿ ಎಲ್ಲ ಕಡೆ ಹುಡುಕಾಡಿದ್ದಾರೆ. ಆದ್ರೆ ಅಷ್ಟರಲ್ಲೇ ಸಾಯಬೇಕು ಅಂತಾ ನಿರ್ಧಾರ ಮಾಡಿದ್ದ ಸಿದ್ದು ಹುಬ್ಬಳ್ಳಿ - ಧಾರವಾಡ ಬೈಪಾಸ್‌ನಲ್ಲಿ ಚಲಿಸುತ್ತಿದ್ದ ಲಾರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ನನ್ನ ಅಳಿಯನ ಸಾವಿಗೆ ಬಡ್ಡಿಕೋರರ ಕಿರುಕುಳವೇ ಕಾರಣ ಅಂತಾರೆ ಸಿದ್ದುವಿನ ಮಾವ.
ಮನೆಗೆ ಆಧಾರವಾಗಿದ್ದ ಕಂಬವೇ ಕಳಚಿಬಿದ್ದ ಸುದ್ದಿ ತಿಳಿಯುತ್ತಿದ್ದ ಹಾಗೆ ಕುಟುಂಬಸ್ಥರು ಗೋಕುಲ್ ಪೊಲೀಸ್ ಠಾಣೆಗೆ ತೆರಳಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತಪ್ಪಿತಸ್ಥ ಮಹೇಶನಿಗೆ ಕಠಿಣ ಶಿಕ್ಷೆ ಆಗಬೇಕು ಆತನಿಗೆ ರಾಜಕೀಯ ಪ್ರಭಾವವಿದೆ. ಪೊಲೀಸರು ಅದಕ್ಕೆ ಬಾಗಬಾರದು. ನಮಗೆ ನ್ಯಾಯ ಸಿಗಬೇಕು ಅಂತಾ ಪ್ರತಿಭಟನೆ ಮಾಡಲು ಮುಂದಾದಾಗ ಕಮಿಷನರ್ ಎನ್. ಶಶಿಕುಮಾರ್ ಗೋಕುಲ್ ಠಾಣೆಗೆ ಬಂದು ದುಃಖದಲ್ಲಿದ್ದ ಕುಟುಂಬದವರಿಗೆ ಧೈರ್ಯ ತುಂಬಿ ನಾನು ನ್ಯಾಯ ಕೊಡಿಸುತ್ತೇನೆ ಅಂತಾ ಸಿದ್ದು ಕುಟುಂಬದವರಿಗೆ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ವ್ಯವಹಾರ ಮಾಡುವ ಭರದಲ್ಲಿ ತಾನು ತೆಗೆದುಕೊಂಡ ಅಸಲಿಗಿಂತ ಆರು ಪಟ್ಟು ಬಡ್ಡಿ ಹಣ ತಿಂದು, ಸಿದ್ದುವಿನ ಪ್ರಾಣಕ್ಕೆ ಯಮನಾದ ಮಹೇಶ್‌ನನ್ನು ಈಗಾಗಲೇ ಗೋಕುಲ್ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಕೊಟ್ಟ ಅಸಲಿಗೆ ಆತನಿಂದ ಎಷ್ಟು ಬಡ್ಡಿ ಪಡೆದಿದ್ದ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಜೊತೆಗೆ ಸಿದ್ದುವಿನ ಸಾವಿಗೆ ಕಾರಣನಾದ ಮಹೇಶನಿಗೆ ಪೊಲೀಸರು ಯಾವ ರೀತಿ ಶಿಕ್ಷೆ ಕೊಡಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 06:18 pm