ಬೆಂಗಳೂರು : ಪತ್ನಿ ಹಾಗೂ ಆಕೆಯ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದಿದ್ದ ಆರೋಪಿಯನ್ನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಸೀಫ್ ಬಂಧಿತ ಆರೋಪಿ ತವರು ಮನೆ ಸೇರಿದ್ದ ಪತ್ನಿ ಹೀನಾ ಕೌಸರ್‌ಳನ್ನ ಹುಡುಕಿಕೊಂಡು ಜನವರಿ 14ರಂದು ಸರಬಂಡೆಪಾಳ್ಯದಲ್ಲಿರುವ ಮನೆಗೆ ಬಂದಿದ್ದ ಆರೋಪಿ, ಪತ್ನಿ ಹಾಗೂ ಅತ್ತೆ ಪರ್ವಿನ್ ತಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದ.
ಪರ್ವಿನ್ ತಾಜ್‌ಳ ಸಹೋದರನ ಮಗನಾಗಿದ್ದ ಆಸೀಫ್‌ನೊಂದಿಗೆ ಹತ್ತು ವರ್ಷಗಳ ಹಿಂದೆ ಹೀನಾ ಕೌಸರ್‌ಳ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು.ಆದರೆ ಗಂಡ ಪರಸ್ತ್ರೀ ಸಹವಾಸ ಮಾಡುತ್ತಿದ್ದಾನೆ, ತನ್ನನ್ನ ಅನುಮಾನಿಸುತ್ತಿದ್ದಾನೆ ಎಂದು ನೊಂದಿದ್ದ ಹೀನಾ ಕೌಸರ್ 8 ತಿಂಗಳ ಹಿಂದೆ ಮಗಳೊಂದಿಗೆ ತವರು ಮನೆಗೆ ಬಂದು ಸೇರಿದ್ದಳು.
ಪತಿಯಿಂದ ದೂರವಾದ ಬಳಿಕ ಹೀನಾ ಕೌಸರ್ ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದಳು. ಜನವರಿ 14ರಂದು ಸಂಜೆ ಅತ್ತೆಯ ಮನೆ ಬಳಿ ಬಂದಿದ್ದ ಆಸೀಫ್, ಪತ್ನಿ ಹೀನಾ ಕೌಸರ್‌ಳ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದ. ಈ ವೇಳೆ ತಡೆಯಲು ಮುಂದಾದ ಅತ್ತೆ ಪರ್ವಿನ್ ತಾಜ್‌ಳ ಮೇಲೆಯೂ ಮನಸೋ ಇಚ್ಚೆ ಹಲ್ಲೆ ಮಾಡಿದ್ದ.
ತಾಯಿ ಮಗಳಿಬ್ಬರ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆ ಮಾರಕಾಸ್ತ್ರ ಬಿಟ್ಟು ಸ್ಥಳದಿಂದ ಆಸೀಫ್ ಪರಾರಿಯಾಗಿದ್ದ. ಗಾಯಗೊಂಡಿದ್ದ ಹೀನಾ ಕೌಸರ್ ಹಾಗೂ ಪರ್ವಿನ್ ತಾಜ್‌ಳನ್ನ ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಆರೋಪಿ ಆಸೀಫ್‌ನನ್ನ ಬಂಧಿಸಿದ್ದಾರೆ. ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
PublicNext
19/01/2025 02:10 pm