ಮೊಳಕಾಲ್ಮುರು: ಪಟ್ಟಣದ ರಾಯದುರ್ಗ ರಸ್ತೆಯಲ್ಲಿರುವ ಬಾಲಕಿಯರ ಹಾಸ್ಟೆಲ್ ನಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪಿಎಸ್ ಐ ಪಾಂಡುರಂಗಪ್ಪ ಮತ್ತು ಕ್ರೈಂ ಪಿಎಸ್ ಐ ಈರೇಶ್ ತಕ್ಷಣವೇ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ, ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಹಾಸ್ಟೆಲ್ ಗೆ ಧಾವಿಸಿ ಬೆಂಕಿಯನ್ನು ನಂದಿಸಿ ಸಂಭಾವ್ಯ ಅವಘಡವನ್ನು ತಪ್ಪಿಸಿದರು.
ಅಡುಗೆ ಮಾಡುವ ವೇಳೆ ಸಣ್ಣದಾಗಿ ಗ್ಯಾಸ್ ಸೋರಿಕೆ ಆಗುತ್ತಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹತ್ತಿಕೊಂಡು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಗ್ಯಾಸ್ ಸೋರಿಕೆಯನ್ನು ನಿಲ್ಲಿಸಿದರು. ಅಗ್ನಿ ಹೊತ್ತಿ ಕೊಳ್ಳುತ್ತಿದ್ದಂತೆ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರು ಭಯಭೀತರಾಗಿದ್ದರು. ಆದ್ರೆ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿ, ದೊಡ್ಡ ದುರಂತ ತಪ್ಪಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವಿದ್ಯಾರ್ಥಿನಿಯರಿಗೆ ಪಿಎಸ್ ಐ ಪಾಂಡುರಂಗಪ್ಪ ಧೈರ್ಯ ತುಂಬಿದರು. ಈ ರೀತಿಯ ಅವಘಡ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಹಾಸ್ಟೆಲ್ ಸಿಬ್ಬಂದಿಗೆ ಕಿವಿಮಾತು ಹೇಳಿದರು.
PublicNext
18/01/2025 09:46 am