ಬೈಲಹೊಂಗಲ: ಉತ್ತರಾಯಣ ಪರ್ವದ ಮಕರ ಸಂಕ್ರಾಂತಿಯಂದು ಪುಣ್ಯ ಸ್ನಾನ ಮಾಡುವದಕ್ಕಾಗಿ ಮಂಗಳವಾರ ಶ್ರೀ ಕ್ಷೇತ್ರ ಸೊಗಲದಲ್ಲಿ ಸಹಸ್ರಾರು ಜನರ ಸಂಗಮವಾಗಿತ್ತು. ದಕ್ಷಿಣ ಕಾಶಿ ಪ್ರಸಿದ್ಧಿಯ ಶ್ರೀಕ್ಷೇತ್ರ ಸೊಗಲ ಶ್ರೀಸೋಮೇಶ್ವರ ದೇವಾಲಯದ ಅಂಗಳದಲ್ಲಿ ಸಂಕ್ರಾಂತಿಯ ಶುಭ ಗಳಿಗೆಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು.
ಮುಂಜಾನೆಯಿಂದ ತಂಡೋಪ ತಂಡವಾಗಿ ಆಗಮಿಸಿದ ಜನಸ್ತೋಮ ಶ್ರೀ ಸೋಮೇಶ್ವರನ ಅಂಗಳದಲ್ಲಿ ಸಡಗರದ ಸಂಕ್ರಾಂತಿ ಹಬ್ಬಆಚರಿಸಿದರು.
ಶಿವಪಾರ್ವತಿ ವಿವಾಹ ಆದ ಸ್ಥಳವಾದ ಸೊಗಲದಲ್ಲಿ ಸ್ನಾನ ಮಾಡಿದರೆ ಗಂಗಾ ನದಿಯಲ್ಲಿ ಮಿಂದಂತೆ ಎಂಬ ಭಾವನೆ ಇದೆ. ಶಿಶಿರ ಋತು ಮುಗಿದು ವಸಂತನ ಆಗಮನದ ಮಕರ ಸಂಕ್ರಾಂತಿ ದಿನ ತನು, ಮನ ಶುದ್ಧಗೊಳಿಸಿಕೊಂಡರು.
ಮಹಾರಾಷ್ಟ್ರ,ಗೋವಾ, ಕೇರಳ, ಹೈದ್ರಾಬಾದ ಹಾಗೂ ಕರ್ನಾಟಕದ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು, ಸೊಗಲದ ವಿಶಾಲ ಗುಡ್ಡಬೆಟ್ಟದಲ್ಲಿ ಕುಳಿತು ಯಳ್ಳು ಹಚ್ಚಿದ ಸಜ್ಜಿ ರೊಟ್ಟಿ ,ವಿವಿಧ ಚಟ್ನಿ, ಕಾಯಿ ಪಲ್ಲೆಗಳು, ಬಾನ, ಮೊಸರಣ್ಣ ,ಸಿಹಿ ಮಾದೋಲಿಯ ರಸಭೂರಿ ಭೋಜನ ಸವಿದು ಸಂತಸಪಟ್ಟರು. ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವ ದಶ್ಯ ಎಲ್ಲೆಡೆ ಸೊಗಸಾಗಿ ಕಂಡಿತು.
Kshetra Samachara
14/01/2025 05:55 pm