ಬೈಲಹೊಂಗಲ: ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಉತ್ಸವ 2025ರ ಅಂಗವಾಗಿ ತಾಲ್ಲೂಕಿನ ಸಂಗೊಳ್ಳಿ ಗ್ರಾಮ ಪಂಚಾಯ್ತಿ ಆವರಣದ ಬಯಲು ಕುಸ್ತಿ ಕಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೋಮವಾರ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿಗಳು ರೋಚಕವಾಗಿ ನಡೆದವು.
ಕುಸ್ತಿ ಕಣ ಹೂ ರಾಶಿಗಳಿಂದ, ಕುಸ್ತಿಪಟುಗಳ ಶಕ್ತಿ ಪ್ರದರ್ಶನದಿಂದ ರಂಗೇರಿತ್ತು. ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತ್ತಿದ್ದ ಅಪಾರ ಸಂಖ್ಯೆಯ ಕುಸ್ತಿಪ್ರೇಮಿಗಳು ಶಿಳ್ಳೆ, ಕೇಕೇ ಹಾಕಿ, ಅಭಿಮಾನದ ಚಪ್ಪಾಳೆ ತಟ್ಟಿ ಪೈಲ್ವಾನರನ್ನು ಹುರಿದುಂಬಿಸಿದರು.
ವಿಜಯಪುರ ಭೂತನಾಳ ತಾಂಡದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮಸ್ಸು ನೀಡಿತು. ಹಳದಿ ರುಮಾಲು ಸುತ್ತಿಕೊಂಡಿದ್ದ ಯುವಕರು, ಹಿರಿಯರು ಕುಸ್ತಿ ಕಣದ ಸುತ್ತ ಓಡಾಡಿ ಕುಸ್ತಿ ಯಶಸ್ವಿಗೊಳಿಸಿದರು.
ಪುರುಷ ವಿಭಾಗದ ಮೊದಲ ಜೋಡಿ ಕುಸ್ತಿಯಲ್ಲಿ ಮಹಾರಾಷ್ಟ್ರ ಪೈಲ್ವಾನ ಬಾಲಾಜಿ ಮೆಟಕರ ಜೊತೆ ಸೆಣಸಿದ ಹರಿಯಾಣ ಪೈಲ್ವಾನ ವಿಪಿನ್ ದಹಿಯಾ ತುರುಸಿನ ಹೋರಾಟದಲ್ಲಿ ವಿಜಯಶಾಲಿಯಾದರು. ಎರಡನೇ ಜೋಡಿ ಕುಸ್ತಿಯಲ್ಲಿ ಪಂಜಾಬ್ ಪೈಲ್ವಾನ ಸತ್ಪಾಲ್ ಸಿಂಗ್ ಜೊತೆ ಸೆಣಸಿದ ಹಾವೇರಿ ಕರ್ನಾಟಕ ಕೇಸರಿ ಪೈಲ್ವಾನ ಕಾರ್ತಿಕ ಕಾಟೆ ವಿಜಯಶಾಲಿಯಾದರು. ಮೂರನೇ ಜೋಡಿ ಕುಸ್ತಿಯಲ್ಲಿ ಮಹಾರಾಷ್ಟ್ರದ ಅಭಿಜಿತ ದೇವಕಾಟೆ ಜೊತೆ ಹೋರಾಡಿದ ಧಾರವಾಡ ಪೈಲ್ವಾನ ನಾಗರಾಜ ಬಸಿಡೋಣಿ ಗೆಲುವು ಸಾಧಿಸಿದರು.
ನಾಲ್ಕನೇ ಜೋಡಿ ಕುಸ್ತಿಯಲ್ಲಿ ಉತ್ತರ ಪ್ರದೇಶ ಉದಯಕುಮಾರ ಜೊತೆ ಸೆಣಸಿದ ಬೆಳಗಾವಿ ದಸರಾ ಕೇಸರಿ ಶಿವಯ್ಯ ಪೂಜೇರಿ ಗೆಲುವಿನ ನಗೆ ಬೀರಿದರು. ಐದನೇ ಜೋಡಿಯಲ್ಲಿ ದಾವಣಗೆರೆ ಬಸವರಾಜ ಪಾಟೀಲ ಜೊತೆ ಹೋರಾಡಿದ ಕಂಗ್ರಾಳಿ ಪರುಶಾಮ ಜಾಧವ ತೀವ್ರ ಸೆಣಸಾಟ ನಡೆದು ಸಮಬಲ ಸಾಧಿಸಿದರು. ಆರನೇ ಜೋಡಿಯಲ್ಲಿ ಸಾಂಗ್ಲಿಯ ವಾಸೀಮ್ ಪಠಾಣ ಜೊತೆ ಕಂಗ್ರಾಳಿ ಕಾಮೇಶ ಪಾಟೀಲ ಗೆಲುವಿನ ನಗೆ ಬೀರಿದರು. ಪುರುಷ ವಿಭಾಗದಲ್ಲಿ ಒಟ್ಟು 33 ಜೋಡಿ ಕುಸ್ತಿಪಟುಗಳು ಸೆಣಸಾಡಿದರು.
PublicNext
14/01/2025 02:15 pm