ಮಂಗಳೂರು: ತುಳುನಾಡಿನಲ್ಲಿ ಕೆಲವೊಂದು ದೇವಸ್ಥಾನಗಳಲ್ಲಿ ತೂಟೆದಾರ ಅಥವಾ ಅಗ್ನಿಕೇಳಿ ಎಂಬ ವಿಶೇಷ ಆಚರಣೆ ರೂಢಿಯಲ್ಲಿದೆ. ಅದರಲ್ಲೂ ಕಟೀಲು ಶ್ರೀಕ್ಷೇತ್ರದಲ್ಲಿ ನಡೆಯುವ "ತೂಟೆದಾರ " ಜಗತ್ಪ್ರಸಿದ್ಧ. ಕಟೀಲಿನಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಗಳ ಜನರ ನಡುವೆ ಅಗ್ನಿಕೇಳಿ ನಡೆದರೆ, ಕಟೀಲು ಸಮೀಪ ದೈವಸ್ಥಾನವೊಂದರಲ್ಲಿ ದೈವ ಹಾಗೂ ಭಕ್ತರ ನಡುವೆ ಬೆಂಕಿಯಾಟ ನಡೆಯುತ್ತದೆ. ಇಲ್ಲಿ ದೈವವೇ, ಭಕ್ತರನ್ನು ಅಟ್ಟಾಡಿಸಿಕೊಂಡು ಹೋಗಿ ಬೆಂಕಿಯ ದೀವಟಿಗೆಯನ್ನು ಅವರತ್ತ ಎಸೆಯೋದು ನೋಡುವುದೇ ರೋಮಾಂಚನ ಅನುಭವ..
ಅದು ನಡು ಇರುಳಿನ ಸಮಯ. ಜುಮಾದಿ ದೈವದ ನೇಮೋತ್ಸವ ಸಂದರ್ಭ. ಗದ್ದೆಯಲ್ಲಿ ಬೆಂಕಿ ಉರಿಯುತ್ತಿರುವ ದೀವಟಿಗೆ ಹಿಡಿದು ಬಂಟ ದೈವ ಭಕ್ತರನ್ನು ಅಟ್ಟಾಡಿಸುತ್ತಿರುತ್ತದೆ. ಓಡುವ ಭಕ್ತರ ಮೇಲೆಯಶ ಉರಿಯುವ ದೀವಟಿಗೆಯನ್ನು ಎಸೆಯತ್ತದೆ. ಇದರಿಂದ ತಪ್ಪಿಸಿಕೊಳ್ಳುತ್ತಿರುವ ಭಕ್ತರು. ಈ ದೃಶ್ಯ ನೋಡುವುದಕ್ಕೊಂದು ರೋಮಾಂಚನಕಾರಿ ಅನುಭವ. ಈ ದೃಶ್ಯ ನೋಡಲು ದ.ಕ.ಜಿಲ್ಲೆಯ ಕಟೀಲು ಸಮೀಪದ ಅಜಾರು ಗ್ರಾಮದ ಜುಮಾದಿ ದೈವಸ್ಥಾನಕ್ಕೆ ಬರಬೇಕು.
ಜುಮಾದಿ ದೈವಸ್ಥಾನದ ನೇಮೋತ್ಸದ ಸಂದರ್ಭ ದೈವದ ಬಂಡಿಯನ್ನು ಎಳೆಯುವ ಸಂಪ್ರದಾಯವಿದೆ. ಜುಮಾದಿ ಹಾಗೂ ಬಂಟ ದೈವ ಬಂಡಿಯೊಂದಿಗೆ, ದೈವಸ್ಥಾನದ ಗದ್ದೆಗೆ ಬರುತ್ತದೆ. ಬಂಡಿ ಎಳೆದ ಬಳಿಕ ಅಗ್ನಿಕೇಳಿ ಆರಂಭವಾಗುತ್ತದೆ. ಬಂಟ ದೈವವು ಉರಿಯುತ್ತಿರುವ ದೀವಟಿಗೆಯನ್ನು ಭಕ್ತರ ಮೇಲೆ ಎಸೆಯುತ್ತದೆ. ದೀವಟಿಗೆ ಮೈಮೇಲೆ ಬೀಳದಂತೆ ಭಕ್ತರು ಅತ್ತಿಂದಿತ್ತ ಓಡುತ್ತಾ, ಸಂಭ್ರಮಿಸುತ್ತಿರುತ್ತಾರೆ. ಅಗ್ನಿಕೇಳಿಯಲ್ಲಿ ಬೆಂಕಿ ತಗುಲಿ ಗಾಯಗೊಂಡರೆ ದೈವದ ಪ್ರಸಾದವನ್ನೇ ಔಷಧಿಯಾಗಿ ಹಚ್ಚಲಾಗುತ್ತದೆ. ಅದರಿಂದಲೇ ಗಾಯ ಶಮನವಾಗುತ್ತದೆ. ಹೀಗೆ ತೂಟದಾರ ನಡೆಯೋದರಿಂದ ಊರಿಗೆ ಬರುವ ಕಷ್ಟ ಪರಿಹಾರ ಆಗುತ್ತೆ ಅನ್ನುವ ನಂಬಿಕೆಯಿದೆ.
PublicNext
13/01/2025 11:32 am