ಮಂಗಳೂರು: ನಗರದ ಕದ್ರಿಪಾರ್ಕ್‌ನಲ್ಲಿ ಶರಧಿ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತ 'ಆಯೋಜಿಸಿದ 'ಕಲಾಪರ್ಬ'ದ ಚಿತ್ರಕಲಾ ಪ್ರದರ್ಶನಕ್ಕೆ ಜನ ಮನಸೋತರು. ಕದ್ರಿ ಪಾರ್ಕ್ ಇಕ್ಕೆಲಗಳಲ್ಲಿ ಭರ್ಜರಿ ಜನಸಂದಣಿ ಕಂಡುಬಂತು. ಆಗಮಿಸಿದ ಕಲಾಸಕ್ತರು ನೂರಾರು ಕಲಾವಿದರ ಕಲಾಕೃತಿಗಳನ್ನು ನೋಡಿ ಆನಂದಿಸಿದರು.
ತೈಲವರ್ಣ ಚಿತ್ರ, ಪೆನ್ಸಿಲ್ ಆರ್ಟ್, ಲೈನ್ ಆರ್ಟ್, ಸಿರಾಮಿಕ್ ಆರ್ಟ್, ಪೊಟ್ರೇಟ್, ನೇಚರ್ ಪೈಂಟಿಂಗ್, ಕ್ಯಾರಿ ಕೇಚರ್, ಬಾಲ್ ಪೆನ್ ಶೇಡಿಂಗ್, ಕರಾವಳಿಯ ಭೂತಕೋಲ, ಕಂಬಳ, ಯಕ್ಷಗಾನಗಳನ್ನು ಬಣ್ಣಗಳಲ್ಲಿ ತುಂಬಿದ ಅಕ್ರೆಲಿಕ್ ಕಲಾಕೃತಿ, ಕೇರಳದ ದೇವಸ್ಥಾನಗಳ ಗೋಡೆಗಳನ್ನು ಸಾಮಾನ್ಯವಾಗಿ ಅಲಂಕರಿಸುವ ಮ್ಯೂರಲ್ ಪೈಂಟಿಂಗ್‌ಗಳು ಇಲ್ಲಿ ಕಂಡು ಬಂದಿತು.
ಸ್ಮಾರ್ಟ್ ಸಿಟಿ ಯೋಜನೆ ಮೂಲಕ ನವೀಕರಣಗೊಂಡಿರುವ ಕದ್ರಿ ಉದ್ಯಾನವನ ಹಾಗೂ ನಡುವಿನ ರಸ್ತೆ ಚಿತ್ರಕಲಾ ಪ್ರದರ್ಶನಕ್ಕೆ ಪೂರಕವಾಗಿ ಒದಗಿ ಬಂತು. ಹಿರಿಯ ವ್ಯಂಗ್ಯಚಿತ್ರ ಕಲಾವಿದ ಜಾನ್‌ಚಂದ್ರನ್ ತಮ್ಮ ಚಿತ್ರಗಳ ಸ್ಟಾಲ್ ಮುಂಭಾಗ ಆಸಕ್ತರು ಫೋಟೋ ತೆಗೆಸಿಕೊಳ್ಳುವ ಸಲುವಾಗಿಯೇ ನಿರ್ಮಿಸಿದ ಸೆಲ್ಫಿ ಸ್ಟಾಂಡ್ ಗಮನ ಸೆಳೆಯಿತು. ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಹಳೇ ಪತ್ರಿಕೆಗಳನ್ನು ಬಳಸಿಕೊಂಡು ಮಾಡಿರುವ ಪ್ರತಿಕೃತಿ ಎಲ್ಲರ ಗಮನ ಸೆಳೆಯಿತು. ಈ ಮೂಲಕ ಸಾರ್ವಜನಿಕ ಜಾಗದಲ್ಲಿ ಎಸೆದ ಪ್ಲಾಸ್ಟಿಕ್ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಮರ, ಲೋಹ ಹಾಗೂ ಕಲ್ಲಿನಿಂದ ತಯಾರಿಸಿದ ಶಿಲ್ಪಕಲಾಕೃತಿ ಆಸಕ್ತರನ್ನು ತನ್ನತ್ತ ಸೆಳೆಯುತ್ತಿತ್ತು. ವೀಣಾ ಐತಾಳ್ ಅವರು ವಿವಿಧ ಬಣ್ಣಗಳನ್ನು ಬಳಸಿಕೊಂಡು ಯಕ್ಷಗಾನ ಕಲಾವಿದ ಸಂಜಯ್ ಬೆಳೆಯೂರು ಅವರು ರಂಗೋಲಿ ಬಿಡಿಸಿದ್ದಾರೆ. ಪೆನ್ಸಿಲ್ ಲೆಡ್ ನಲ್ಲಿ ಪ್ರಶಾಂತ್ ಆಚಾರ್ಯ ಅವರು ತಯಾರಿಸಿರುವ, ಚಿತ್ರಾಪುರದ ಪದ್ಮಾ ಕರ್ಕೇರ ಅವರು ಚಿಪ್ಪುಗಳನ್ನು ಬಳಸಿಕೊಂಡು, ಬಿಜೈನ ಜೇನ್ ನೊರೋನ್ಹಾ ಅವರು ಕಾಫಿ ಪುಡಿಯಲ್ಲಿ ರಚಿಸಿರುವ ಕಲಾಕೃತಿಗಳು ಗಮನ ಸೆಳೆದವು. ಅದೇ ರೀತಿ ವೇದಿಕೆಯಲ್ಲಿ ನಡೆದ ಭರತನಾಟ್ಯ ಸೇರಿದಂತೆ ವಿವಿಧ ಕಲಾಪ್ರದರ್ಶನ ಆಸಕ್ತರ ಗಮನ ಸೆಳೆಯಿತು.
PublicNext
14/01/2025 06:43 pm