ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಶುದ್ಧ ನೀರು ಪೂರೈಕೆ ವರದಿಯಲ್ಲಿ ದೃಢ ಎಂದ ವಿಪಕ್ಷ- 'ಇದು ಚುನಾವಣೆ ಗಿಮಿಕ್' ಬಿಜೆಪಿ ಆಕ್ರೋಶ

ಮಂಗಳೂರು: ನಗರದ ಶೇ.50ರಷ್ಟು ಪ್ರದೇಶಗಳಿಗೆ ಅಶುದ್ಧ ನೀರು ಪೂರೈಸಲಾಗುತ್ತಿದೆ ಎಂದು ಮಂಗಳೂರು ಮನಪಾ ಸದಸ್ಯರು ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು‌‌. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ನೀರನ್ನು ಪರೀಕ್ಷೆ ಮಾಡಿ ವರದಿ ಪಡೆದಿದ್ದು, ಇದರಲ್ಲಿ ನಗರಕ್ಕೆ ಸರಬರಾಜಾಗುವ ನೀರು ಅಶುದ್ಧವೆಂದು ದೃಢಗೊಂಡಿದೆ ಎಂದು ಬಹಿರಂಗ ಪಡಿಸಿದೆ. ಆದರೆ, ಪಾಲಿಕೆಯ ಆಡಳಿತರೂಢ ಬಿಜೆಪಿ ಮಾತ್ರ ಈ ವರದಿ ಚುನಾವಣೆ ಗಿಮಿಕ್ ಎಂದಿದೆ.

ಎಂಎಲ್‌ಸಿ ಐವಾನ್ ಡಿಸೋಜ ಹಾಗೂ ಪಾಲಿಕೆಯ ವಿಪಕ್ಷ ಸದಸ್ಯರು ಮಂಗಳೂರಿನ ಫಿಶರೀಸ್ ಕಾಲೇಜು ಪ್ರಯೋಗಾಲಯದಲ್ಲಿ ನಗರಕ್ಕೆ ಪೂರೈಕೆ ಮಾಡಲಾಗುತ್ತಿರುವ ವಿವಿಧ ಭಾಗಗಳ ನೀರಿನ ಪರೀಕ್ಷೆ ನಡೆಸಿದ್ದಾರೆ. ಈ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ.

ಅಲ್ಲದೆ, ಪಾಲಿಕೆಯ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ಮಂಗಳೂರಿನ ಪಚ್ಚನಾಡಿ, ಬೆಂದೂರ್‌ವೆಲ್, ಕಡೆಕಾರು, ಜಪ್ಪಿನಮೊಗರು, ಚೇಳ್ಯಾರು, ಮುಚ್ಚೂರು ಭಾಗದ ಎಸ್‌ಟಿಪಿ, ಪಂಪ್‌ಹೌಸ್‌ಗಳಿಗೆ ಭೇಟಿ ನೀಡಲಾಗಿದೆ. 10ಕ್ಕೂ ಅಧಿಕ ವಾರ್ಡ್‌ಗಳ ನೀರಿನ ಸ್ಯಾಂಪಲ್ ಪಡೆದು ಟೆಸ್ಟ್ ಮಾಡಲಾಗಿದೆ. ಆದರೆ, ಈ ಪರೀಕ್ಷಾ ವರದಿಗಳಲ್ಲೂ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ಆದ್ದರಿಂದ ಇದರ ವಿರುದ್ಧ ತನಿಖೆ ನಡೆಸಬೇಕೆಂದು ಸಿಎಂಗೆ ಮನವಿ ನೀಡಲು ಮುಂದಾಗಿದೆ.

ಆದರೆ, ಕಾಂಗ್ರೆಸ್‌‌ನ ಈ ಆರೋಪವನ್ನು ಪಾಲಿಕೆಯ ಆಡಳಿತರೂಢ ಬಿಜೆಪಿ ತಳ್ಳಿ ಹಾಕಿದೆ. ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ನವರಿಗೆ ಇದೆಲ್ಲ ನೆನಪಾಗುತ್ತದೆ. ನಾವು ಪ್ರತಿದಿನ ನೀರಿನ ಪರೀಕ್ಷೆ ನಡೆಸುತ್ತೇವೆ. ಆದರೆ, ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಇದೊಂದು ಸುಳ್ಳು ವರದಿಯೆಂದು ಮೇಯರ್ ಮನೋಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ಪಾಲಿಕೆಯಲ್ಲಿ ಎದ್ದಿರುವ ಈ ವಾಟರ್ ಪಾಲಿಟಿಕ್ಸ್‌ನಿಂದ ಜನರಿಗೆ ಗೊಂದಲವಾಗಿ ಪರಿಣಮಿಸಿದೆ. ಏನೇ ಆದರೂ ರಾಜಕೀಯವನ್ನು ಬದಿಗಿಟ್ಟು ಶುದ್ಧ ನೀರು ಸರಬರಾಜಿಗೆ ಎರಡು ಪಕ್ಷಗಳು ಸರಿಯಾದ ಕ್ರಮ ಕೈಗೊಳ್ಳಬೇಕಿದೆ.

Edited By : Shivu K
PublicNext

PublicNext

14/01/2025 01:39 pm

Cinque Terre

28.64 K

Cinque Terre

2