ಮಂಗಳೂರು: ಮೂಡುಬಿದಿರೆಯಲ್ಲಿ ಮಂಗಳವಾರ ನಡೆಯಲಿದ್ದ ಮನೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಸ್ತಕ್ಷೇಪ ನಡೆಸಿರುವುದು ತನಗೆ ನೋವನ್ನುಂಟು ಮಾಡಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕೆಲವು ತಿಂಗಳಿಂದ ಈ ಭಾಗದ ನಿವೇಶನರಹಿತರಿಗೆ ಹಕ್ಕುಪತ್ರ ಕೊಡಿಸಲು ಕಂದಾಯ ಅಧಿಕಾರಿಗಳ ಮೂಲಕ ಸಾಕಷ್ಟು ಪ್ರಯತ್ನ ಪಟ್ಟು ಸುಮಾರು ಶೇ 90 ದಷ್ಟು ಫಲಾನುಭವಿಗಳಿಗೆ ಅಂದರೆ 310 ಮಂದಿಗೆ ಪತ್ರ ಸಿದ್ದ ಪಡಿಸಲಾಗಿದೆ ಇದರ ವಿತರಣೆ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂದರು.
'ನಿನ್ನೆಯಷ್ಟೆ ಮೇಲಧಿಕಾರಿಗಳ ಸೂಚನೆಯಂತೆ ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಶುಕ್ರವಾರ ನಡೆಸುವ ಬಗ್ಗೆ ತಹಶೀಲ್ದಾರರು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಕ್ಕುಪತ್ರ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಶುಕ್ರವಾರ ಸರಕಾರದ್ದೇ ಉಪಸಮಿತಿಯೊಂದರ ಸಭೆಯಲ್ಲಿ ತಾನು ಅಧ್ಯಕ್ಷತೆ ವಹಿಸುವ ಅನಿವಾರ್ಯ ಇರುವ ಕಾರಣ ಅಂದು ಊರಲ್ಲಿರಲು ಸಾಧ್ಯವಾಗುತ್ತಿಲ್ಲ ನಿಜಕ್ಕಾದರೆ, ಸಚಿವರು ಭಾಗವಹಿಸುವಷ್ಟು ದೊಡ್ಡ ಕಾರ್ಯಕ್ರಮ ಅದಲ್ಲ; ಇದನ್ನು ಶಾಸಕನಾಗಿ ತಾನು ಮಾಡಿದ್ದರೂ ಸಾಕು. ಆದರೆ ಸಚಿವರು ಭಾಗವಹಿಸುವಾಗ ಶಾಸಕನಾಗಿ ತಾನು ಇರಬೇಕು ಎಂಬುದು ತನ್ನ ಇಚ್ಛೆ ಆದರೆ ಈ ನಡುವೆ ತಾನಿಲ್ಲದ ದಿನ ಈ ಕಾರ್ಯಕ್ರಮವನ್ನು ನಡೆಸಲು ಕಾಂಗ್ರೆಸ್ ಮುಂದಾಳುಗಳು ಮೇಲಿನಿಂದಲೇ ಪ್ರಭಾವಬೀರಿದ್ದು ಸ್ಪಷ್ಟ' ಎಂದರು.
ಅಷ್ಟಾದರೂ ಪರವಾಗಿಲ್ಲ ನಾನು ಕೆಲಸ ತಾನು ಮಾಡುತ್ತಲೇ ಹೋಗುವೆ. ಜನರಿಗೆ ಉಪಕಾರವಾದರೆ ಆಯಿತು. ಈ ಎಲ್ಲ ವಿಚಾರಗಳ ಬಗ್ಗೆ ತಾನು ಮುಂದೆ ಸಚಿವರ ಗಮನ ಸೆಳೆಯುವೆ ಎಂದರು.
ಹಕ್ಕುಪತ್ರ ವಿತರಣ ಕಾರ್ಯಕ್ರಮ ಮುಂದೂಡುವ ವಿಚಾರದಲ್ಲಿ ಮಾಜಿ ಸಚಿವರ ಅಭಯಚಂದ್ರ ಅವರ ಹಸ್ತಕ್ಷೇಪ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ತನ್ನ ಮತ್ತು ಮಾಜಿ ಸಚಿವ ಅಭಯಚಂದ್ರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ನಾವಿಬ್ಬರೂ ಪರಸ್ಪರ ಗೌರವ ಭಾವ ಹೊಂದಿದ್ದೇನೆ. ಅವರ ಸಲಹೆ, ಮಾರ್ಗದರ್ಶನವನ್ನು ಪಡೆಯುವುದರಲ್ಲಿ ತಾನು ಹಿಂದೆ ಬಿದ್ದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಅವರಾಗಲೀ ತಾನಾಗಲೀ ರಾಜಕೀಯ ಮಾಡಿಲ್ಲ ಎಂದರು.
ಈ ಹಿಂದಿನ ಅವಧಿಯಲ್ಲಿ ತಾನು 2,580 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೆ ಈ ಬಾರಿ ಕನಿಷ್ಠ 5 ಲಕ್ಷ ರೂ. ಬಿಡುಗಡೆ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಕೋಟ್ಯಾನ್ ಹೇಳಿದರು. ಕಳೆದ ಸಾಲಿನಲ್ಲಿ ಎನ್ ಜಿಓ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಕಳೆದ ಸಾಲಿನಲ್ಲಿ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿರುವ 224 ಮಂದಿ ಶಾಸಕರ ಪೈಕಿ 542 ಪ್ರಶ್ನೆ ಕೇಳಿ, 247 ಪ್ರಶ್ನೆಗಳ ಚರ್ಚೆಯಲ್ಲಿ ಪಾಲ್ಗೊಂಡ ತನಗೆ 3ನೇ ಸ್ಥಾನ ಲಭಿಸಿರುವುದು ಸಂತಸ ತಂದಿದೆ ಎಂದರು. ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷನಾಗರಾಜ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿದ್ದರು. ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಶಾಂತಿಪ್ರಸಾದ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
14/01/2025 09:06 am