ಮಂಗಳೂರು: ನಗರದ ಹೊರವಲಯದ ನರಿಂಗಾನ ಕಂಬಳಕ್ಕೆ ಸಿಎಂ ಆಗಮನದ ವೇಳೆ ಯುವಕನೋರ್ವನು ತಾನು ಮಾಡಿದ ಎಡವಟ್ಟಿನಿಂದ ದ್ವಿಚಕ್ರ ವಾಹನ ಸಹಿತ ರಸ್ತೆಗೆಸೆಯಲ್ಪಟ್ಟು ಬಿದ್ದ ಪ್ರಸಂಗ ನಡೆದಿದೆ.
ಶನಿವಾರ ಕಂಬಳದಲ್ಲಿ ಭಾಗಿಯಾಗಲು ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ನವ್ಯಯರಿಂಗಾನಕ್ಕೆ ವಾಹನದಲ್ಲಿ ತೆರಳುತ್ತಿದ್ದರು. ಸಿಎಂ ವಾಹನ ಸಂಚಾರಕ್ಕೆ ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ಸಿಎಂ ವಾಹನ ಸಂಚರಿಸುವ ಮೊದಲು ಇತರ ವಾಹನಗಳು ರಸ್ತೆಯಲ್ಲಿ ಸಾಗದಂತೆ ಅಲ್ಲಲ್ಲಿ ರಸ್ತೆಯಲ್ಲಿ ಟೇಪ್‌ಗಳನ್ನು ಅಳವಡಿಸಿ ಝೀರೋ ಟ್ರಾಫಿಕ್ ಮಾಡಲಾಗಿತ್ತು.
ಅದರಂತೆ ತೊಕ್ಕೊಟ್ಟು ಕುತ್ತಾರು ರಸ್ತೆಯ ಚೆಂಬುಗುಡ್ಡೆ ಕೆಇಬಿ ಬಳಿಯೂ ಪೊಲೀಸರು ಟೇಪ್ ಅಳವಡಿಸಿದ್ದರು. ಸಿಎಂ ವಾಹನ ಪಾಸ್ ಆಗುತ್ತಿದ್ದಂತೆ ಯುವಕನೋರ್ವನು ತರಾತುರಿಯಲ್ಲಿ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಲು ಮುಂದಾಗಿದ್ದಾನೆ. ಟೇಪ್ ಅನ್ನು ಮೇಲಕ್ಕೆತ್ತಿ ಹೊರಡಲು ವಾಹನ ಚಲಾಯಿಸಿ ಮುಂದೆ ಹೋಗುತ್ತಿದ್ದಂತೆ ಟೇಪ್ ಗಾಳಿಗೆ ಹಾರಿ ಆತನ ಕತ್ತಿಗೆ ಸುತ್ತಿ ವಾಹನ ಸಹಿತ ಆತ ರಸ್ತೆಗೆ ಬಿದ್ದಿದ್ದಾನೆ. ಇದೀಗ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
13/01/2025 03:42 pm