ಮಂಗಳೂರು: ಕೊಳವೆಬಾವಿಯೊಳಗೆ ಸಣ್ಣಮಕ್ಕಳು ಬಿದ್ದು ಹರಸಾಹಸಪಟ್ಟು ಕಾರ್ಯಾಚರಣೆ ಮಾಡುವ ವಿಚಾರ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಮಂಗಳೂರಿನ ಕೋಟೆಕಾರಿನಲ್ಲಿ ಬೋರ್‌ವೆಲ್ ಕೊಳವೆಯೊಳಗೆ ಶ್ವಾನಮರಿಯೊಂದು ಬಿದ್ದಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆ ಪುಟ್ಟಜೀವವನ್ನು ಮೇಲಕ್ಕೆತ್ತಿದೆ.
ಕೋಟೆಕಾರ್‌ನಲ್ಲಿ ನಾಯಿಮರಿಯೊಂದು ಬೋರ್‌ವೆಲ್‌ಗೆ ಬಿದ್ದಿದೆ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಕರೆ ಬಂದಿತ್ತು. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದೆ. ನಾಯಿಮರಿಯು ಸುಮಾರು 25 ಅಡಿ ಆಳದ ಅರ್ಧ ಅಡಿ ವ್ಯಾಸದ ಬೋರ್‌ವೆಲ್‌ಗೆ ಬಿದ್ದಿತ್ತು. ಅಲ್ಲದೆ, ನಾಯಿಮರಿಯ ಮೇಲೆ ಒಂದು ಚಿಕ್ಕ ಮರದ ತುಂಡು ಕೂಡ ಬಿದ್ದಿತ್ತು.
ಆದ್ದರಿಂದ ಅಗ್ನಿಶಾಮಕದಳ ಸಿಬ್ಬಂದಿಯು ಮೊದಲು ಮೀನು ಹಿಡಿಯುವ ಕೊಕ್ಕೆಯನ್ನು ಬಳಸಿ ಮರದ ತುಂಡನ್ನು ನಿಧಾನವಾಗಿ ಮೇಲೆ ತೆಗೆದಿದೆ. ಬಳಿಕ ಅದೇ ಕೊಕ್ಕೆ ಬಳಸಿ ನಾಯಿಮರಿಯನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ರಕ್ಷಿಸಿದೆ. ಸ್ಥಳೀಯರು ಅಗ್ನಿಶಾಮಕದಳದ ಕಾರ್ಯವನ್ನು ಶ್ಲಾಘಿಸಿದ್ದಾರೆ.
PublicNext
14/01/2025 09:55 am