ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಗೇರುಕಟ್ಟೆ, ಬೆಥನಿ ಶಾಲೆಯ ಬಳಿ ಬೈಕ್ ಗೆ ಆಟೋ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಆಟೋ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡ ಬೈಕ್ ಸವಾರನನ್ನು ಕೆರೆಕಾಡು ನಿವಾಸಿ ಪ್ರಜ್ವಲ್ (21), ಆಟೋ ಚಾಲಕ ಬಪ್ಪನಾಡು ನಿವಾಸಿ ಸುರೇಶ್ (51) ಎಂದು ಗುರುತಿಸಲಾಗಿದ್ದು ಆಟೋದಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ.
ಗಾಯಾಳು ಬೈಕ್ ಸವಾರ ಮುಲ್ಕಿ ಕ್ಷೀರ ಸಾಗರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ನಿರ್ವಹಿಸಿ ಬೈಕ್ ನಲ್ಲಿ ತನ್ನ ಮನೆ ಕಡೆಗೆ ವಾಪಸಾಗುತ್ತಿದ್ದ ವೇಳೆ ಗೇರುಕಟ್ಟೆ ಬೆಥನಿ ಶಾಲೆಯ ಬಳಿ ಪ್ರಯಾಣಿಕರನ್ನು ಇಳಿಸಲೆಂದು ಏಕಾಏಕಿ ಆಟೋ ಚಾಲಕ ಯೂ ಟರ್ನ್ ಮಾಡುತ್ತಿದ್ದಾಗ ಬೈಕ್ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬೈಕ್ ಹಾಗೂ ಆಟೋಗೆ ಹಾನಿಯಾಗಿದ್ದು, ಕೂಡಲೇ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಠ್ಠಲ್ ಎನ್. ಎಂ. ಮತ್ತಿತರರು ಸೇರಿಕೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಅಪಘಾತದ ಸಂದರ್ಭ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು
ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಎರಡು ವಾಹನ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
Kshetra Samachara
14/01/2025 04:42 pm