ಶಿವಮೊಗ್ಗ: ಬಾಂಗ್ಲಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದ ಹೆಮ್ಮೆಯ ಯುದ್ಧ ವಿಜೇತ ಟ್ಯಾಂಕರ್ ಭೂಪತಿ ಜೆಡ್‍ಎಕ್ಸ್ 1878 ಜಿ.ಎಂ. ನೋಡಿ ಪುಟಾಣಿ ಮಕ್ಕಳು ಪುಲ್ ಖುಷ್ ಆಗಿದ್ದಾರೆ. ಮಲೆನಾಡಿನಲ್ಲಿ ಒಂದು ವರ್ಷದಿಂದ ಕಣ್ಮರೆಯಾಗಿದ್ದ ಯುದ್ಧ ಟ್ಯಾಂಕರ್ ಇದೀಗ ಅಲ್ಲಮ ಪ್ರಭು ಮೈದಾನದಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಯುದ್ಧ ಟ್ಯಾಂಕರ್ ಮೇಲೆ ಕೂತು ಖುಷಿ ಪಡ್ತೀರೋ ಮಕ್ಕಳು, ಮಕ್ಕಳಿಗೆ ಯುದ್ಧ ಬಗ್ಗೆ ತಿಳಿಸುತ್ತಿರೋ ಪೋಷಕರು, ಯುದ್ಧ ಟ್ಯಾಂಕರ್ ಮುಂದೆ ಫೋಟೋ ಕ್ಲಿಕ್ ಮಾಡ್ತೀರೊ ಯುವಕರು. ಹೌದು, ಶಿವಮೊಗ್ಗ ನಗರದ ಅಲ್ಲಮ ಪ್ರುಭು (ಫ್ರೀಡಂ ಪಾರ್ಕ್ ) ಮೈದಾನಕ್ಕೆ ಆಗಮಿಸಿರುವ ಯುದ್ಧ ವಿಜೇತ ಟ್ಯಾಂಕರ್ ಭೂಪತಿ ಜೆಡ್‍ಎಕ್ಸ್ 1878 ಜಿ.ಎಂ. ನೋಡಲು ಎಲ್ಲರೂ ಕಾತುರದಿಂದ ಆಗಮಿಸುತ್ತಿದ್ದಾರೆ.
ಪಾಕಿಸ್ತಾನದ ವಿರುದ್ಧ ಬಾಂಗ್ಲಾ ವಿಮೋಚನಾ ಚಳುವಳಿಯಲ್ಲಿ ಭಾರತ, ಬಾಂಗ್ಲಾದೇಶಕ್ಕೆ ಸಹಕಾರ ನೀಡಿ ಭೂಪತಿ ಜೆಡ್‍ಎಕ್ಸ್ 1878 ಜಿ.ಎಂ. ಕಳಿಸಿ ಕೊಟ್ಟಿತ್ತು. ಆಗ ಈ ಯುದ್ಧ ಟ್ಯಾಂಕರ್ ಬಾಂಗ್ಲಾ ದೇಶಕ್ಕೆ ಸಹಕಾರಿಯಾಗಿತ್ತು, ಈ ಯುದ್ಧ ಟ್ಯಾಂಕರ್ ನ್ನು ಕಳೆದ ವರ್ಷ ಮಲೆನಾಡಿನ ಶಿವಮೊಗ್ಗಕ್ಕೆ ತರಲಾಗಿತ್ತು. ಕಳೆದ ಒಂದು ವರ್ಷದಿಂದ ಎಂಆರ್‍ಎಸ್ ಸರ್ಕಲ್‍ನಲ್ಲಿ ಧೂಳು ಹಿಡಿಯುತ್ತಾ ನಿಂತಿದ್ದ ಯುದ್ಧ ಟ್ಯಾಂಕರ್ ಗೆ ಕೊನೆಗೂ ಸೂಕ್ತ ಜಾಗ ದೊರಕಿಸಿಕೊಡುವಲ್ಲಿ ಮಹಾನಗರ ಪಾಲಿಕೆ ಯಶಸ್ವಿಯಾಗಿದೆ. ಇನ್ನು, ಈ ಯುದ್ಧ ಟ್ಯಾಂಕರ್ ರಷ್ಯಾ ನಿರ್ಮಿತ ಟಿ 55 ಯುದ್ಧ ಟ್ಯಾಂಕರ್ ಆಗಿದ್ದು, ಸುಮಾರು 36 ಸಾವಿರ ಕೆ.ಜಿ. ತೂಕವಿದೆ. ಇದೀಗ ಮಲೆನಾಡಿನ ಯುವಕರು ಹಾಗೂ ಮಕ್ಕಳ ಆಕರ್ಷಣೀಯ ಕೇಂದ್ರಬಿಂದುವಾಗಿದೆ.
ಮಲೆನಾಡಿನ ಯುವಕ-ಯುವತಿಯರಿಗೆ ದೇಶಪ್ರೇಮ ಮತ್ತು ಸೈನ್ಯಕ್ಕೆ ಭರ್ತಿಯಾಗಲು ಪ್ರೇರಣೆ ನೀಡುವ ಈ ಯುದ್ಧ ಟ್ಯಾಂಕರ್ ನ ಸ್ಥಾಪನೆ ಕಾರ್ಯಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 26, 2025 ರಂದು ಸಕಲ ಗೌರವಗಳೊಂದಿಗೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. 1983-84ರ ವರೆಗೆ ಈ ಟ್ಯಾಂಕರ್ ಸೇವೆಯಲ್ಲಿತ್ತು. ಅದು ನಿಷ್ಕ್ರೀಯಗೊಂಡ ಬಳಿಕ ಅದನ್ನು ರಕ್ಷಣಾ ಇಲಾಖೆಯ ಅನುಮತಿ ಪಡೆದು ಇಲ್ಲಿಗೆ ತರುವುದು ಸಾಹಸದ ಕೆಲಸವಾಗಿತ್ತು. ಸಂಸದ ಬಿ.ವೈ.ರಾಘವೇಂದ್ರ ಮತ್ತು ಸೈನಿಕ ಇಲಾಖೆಯ ಅಂದಿನ ಉಪನಿರ್ದೇಶಕರಾದ ಡಾ.ಸಿ.ಎಸ್.ಹಿರೇಮಠ್ ಮತ್ತು ಜಿಲ್ಲಾ ಮಾಜಿ ಸೈನಿಕರ ಸಂಘದ ಸತತ ಪ್ರಯತ್ನದಿಂದ ಈ ಕಾರ್ಯ ಯಶಸ್ವಿಯಾಗಿದೆ.
ಒಟ್ಟಾರೆ, ಯುದ್ಧ ಟ್ಯಾಂಕರ್ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು, ದೇಶಪ್ರೇಮಿಗಳು ಹಾಗೂ ಮಕ್ಕಳು ಪ್ರತಿದಿನ ಅಲ್ಲಮ ಪ್ರಭು ಮೈದಾನಕ್ಕೆ ಭೇಟಿ ನೀಡಿ ಯುದ್ಧ ಟ್ಯಾಂಕರ್ ನೋಡಿ ಖುಷಿ ಪಡ್ತಿದ್ದಾರೆ. ಇನ್ನು, ಸುತ್ತಮುತ್ತ ಸೂಕ್ತ ವ್ಯವಸ್ಥೆ ಕಲ್ಪಿಸಿ ಟ್ಯಾಂಕರ್ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
-ವೀರೇಶ್ ಜಿ.ಹೊಸೂರ್, ಪಬ್ಲಿಕ್ ನೆಕ್ಸ್ಟ್, ಶಿವಮೊಗ್ಗ
PublicNext
10/01/2025 12:15 pm