ಕಾಗವಾಡ: ಡಿಕೆಶಿ ದೆಹಲಿ ಭೇಟಿ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಜಾರಕಿಹೊಳಿ ಆಪ್ತ ಬಣ ವೇದಿಕೆ ಹಂಚಿಕೊಂಡಿದ್ದು ತೀವ್ರ ಕುತೂಹಲ ಮೂಡಿಸಿದೆ.
ಲೋಕ ಸಭೆ ಚುನಾವಣೆ ಬಳಿಕ ಮುನಿಸಿಕೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿಯನ್ನ ಮಣಿಸಲು ದೊಡ್ಡ ಪ್ಲ್ಯಾನ್ ಹಾಕಿದ್ದಾರೆ.ಮೂಲ ಕಾಂಗ್ರೆಸ್ಸಿಗರು ಹಾಗೂ ಜಾರಕಿಹೊಳಿ ಆಪ್ತರನ್ನ ಒಗ್ಗೂಡಿಸುವ ಪ್ಲಾನ್ ನಡೆದಿದ್ದು, ಇದಕ್ಕೆ ರಮೇಶ ಜಾರಕಿಹೊಳಿ ಆಪ್ತರಾದ ಮಹೇಶ ಕುಮಠಳ್ಳಿ, ಮಾಜಿ ಸಚಿವ ಶ್ರೀಮಂತ ಪಾಟೀಲ ಕೂಡಾ ಕೈಜೋಡಿಸಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಕಾರಣ ನಿನ್ನೆ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಯೋಗೇಶ ಪಾಟೀಲ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಜೊತೆ ಸಚಿವ ಸತೀಶ್ ಜಾರಕಿಹೊಳಿ ಆಪ್ತರು ಕಾಣಿಸಿಕೊಂಡಿದ್ದಾರೆ.2018-19 ರ ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರ ಸ್ಪರ್ಧೆಗಿಳಿದಿದ್ದ ಗಜಾನನ ಮಂಗಸೂಳಿ, ಹಾಗೂ ಕೆಲ ಮೂಲ ಕಾಂಗ್ರೆಸ್ ನಾಯಕರು ವೇದಿಕೆ ಹಂಚಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಸಿಎಂ ಕುರ್ಚಿ ಬಗ್ಗೆ ಅಹಿಂದ ನಾಯಕರ ಕಣ್ಣು ಬಿದ್ದಿದ್ದು ಪರೋಕ್ಷವಾಗಿ ಡಿಕೆಶಿ ಹಣಿಯಲು ಎಲ್ಲಾ ತರಹದ ತಯಾರಿ ನಡೆದಿರುವ ಶಂಕೆ ಹುಟ್ಟುಹಾಕಿದೆ. ಒಂದೇ ವೇದಿಕೆಯಲ್ಲಿ ಎಂದೂ ಕಾಣದ ನಾಯಕರ ದಿಢೀರ್ ಆಗಮನ ಎಲ್ಲೋ ರಾಜ್ಯ ರಾಜಕಾರಣದ ಬದಲಾವಣೆಯ ಸುಳಿವು ನೀಡ್ತಿದೆಯಾ ಎಂಬ ಮಾತು ಕೇಳಿಬರುತ್ತಿವೆ.
PublicNext
08/01/2025 04:00 pm