ಬೆಳಗಾವಿ: ಸಂಭಾಜಿ ಮಾಹಾರಾಜರ ಪ್ರತಿಮೆ ಅನಾವರಣದ ವೇಳೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರ ಸಚಿವರ ವಿರುದ್ಧ ಹಾಗೂ ಸ್ಥಳೀಯ ನಾಯಕರ ದೂರು ದಾಖಲಾಗಿದೆ.
ಬೆಳಗಾವಿಯ ಅನಗೋಳದ ಡಿವಿಎಸ್ ಚೌಕ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಧರ್ಮವೀರ ಶ್ರೀ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ವಿಚಾರವಾಗಿ ಸ್ಥಳೀಯ ಶಾಸಕ ಅಭಯ್ ಪಾಟೀಲ್ ಹಾಗೂ ಎಂಇಎಸ್ ಮುಖಂಡ ರಮಾಕಾಂತ ಕೊಂಡುಸ್ಕರ್ ಮಧ್ಯೆ ಫೈಟ್ ಏರ್ಪಟ್ಟಿತ್ತು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಮೂರ್ತಿ ಅನಾವರಣಕ್ಕೆ ಅವಕಾಶ ಇಲ್ಲ ಎಂದು ಬೆಳಗಾವಿ ಡಿ.ಸಿ ಮೊಹಮ್ಮದ್ ರೋಷನ್ ಕೂಡಾ ಹೇಳಿದರು. ಜಿಲ್ಲಾಡಳಿತದ ನಿಷೇಧದ ನಡುವೆ ಜನವರಿ 5ರಂದು ಮೂರ್ತಿ ಅನಾವರಣ ಮಾಡಿಸಿದ್ದ ಶಾಸಕ ಅಭಯ್ ಪಾಟೀಲ್ ಅವರು, ಮಹಾರಾಷ್ಟ್ರದ ಸಚಿವ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ ಶಿವೇಂದ್ರ ರಾಜೇ ಬೋಸಲೆ ಕರೆಯಿಸಿ ಅದ್ಧೂರಿ ಶೋಭಾಯಾತ್ರೆ ಮಾಡಿ ಪ್ರತಿಮೆ ಲೋಕಾರ್ಪಣೆ ಮಾಡಿಸಿದರು. ಈ ವೇಳೆ ಭಾಷಣದ ಅಂತ್ಯದಲ್ಲಿ ಮಹಾರಾಷ್ಟ್ರ ಸಚಿವ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದರು. ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿವೆ.
ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ಸಚಿವ, ಬಿಜೆಪಿ ಶಾಸಕ ಅಭಯ್ ಪಾಟೀಲ್, ಬೆಳಗಾವಿ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ್ ವಿರುದ್ಧವು ದೂರು ದಾಖಲಾಗಿದೆ.
ಕಿತ್ತೂರು ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಅವರು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಜನಪ್ರತಿನಿಧಿಗಳ ವಿರುದ್ಧ ದೂರು ನೀಡಿರುವ ಹಿನ್ನೆಲೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
PublicNext
08/01/2025 12:34 pm