ಯಲ್ಲಾಪುರ: ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ವಾಹನದಲ್ಲಿ ಆರು ಎತ್ತುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವಾಗ ಯಲ್ಲಾಪುರದಲ್ಲಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಎತ್ತುಗಳನ್ನು ಹಾಗೂ ಇವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಚಾಲಕ ವೃತ್ತಿಯ ಹಾವೇರಿಯ ಗಬ್ಬೂರಿನ ಫಕ್ಕೀರೇಶ ತಂದೆ ಗುಡ್ಡಪ್ಪ ದೊಡ್ಡಮನಿ ಹಾಗೂ ಹಾನಗಲ್ ತಾಲುಕಿನ ಹಿರೇಬಸೂರಿನ, ಕ್ಲೀನರ್ ವೃತ್ತಿಯ ಮಂಜು ತಂದೆ ಫಕ್ಕೀರಪ್ಪ ಹರಿಜನ ಎಂಬುವವರು ತಮ್ಮ ಪಿಕ್ ಅಪ್ ವಾಹನದಲ್ಲಿ ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಿಂದ ಆರು ಎತ್ತುಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ಅಂಕೋಲಾ ಕಡೆ ಹೋಗುತ್ತಿದ್ದಾಗ, ಯಲ್ಲಾಪುರ ಪಟ್ಟಣದ ಜೋಡುಕೆರೆ ಸಮೀಪ ಹೆದ್ದಾರಿಯಲ್ಲಿ ಪಿಎಸ್ಸೈ ಶೇಡಜಿ ಚೌಹ್ಹಾಣ ಹಾಗೂ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ವಶಕ್ಕೆ ಪಡೆದ ಆರು ಎತ್ತುಗಳ ಮೌಲ್ಯ 2,40,000 ರೂ ಹಾಗೂ ವಾಹನದ ಮೌಲ್ಯ 2 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/01/2025 11:25 am