ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಸಾಲ ಮರುಪಾವತಿ ಮಾಡಿಲ್ಲ ಎಂದು ಫೈನಾನ್ಸ್ ಕಂಪನಿಯವರು ಬಾಣಂತಿ ಸೇರಿ ಇಡೀ ಕುಟುಂಬವನ್ನೇ ಮನೆಯಿಂದ ಹೊರ ಹಾಕಿ, ಮನೆಗೆ ಬೀಗ ಹಾಕಿ ಹೋಗಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.
ರಾತ್ರಿಯಿಡೀ ಮನೆಯ ಹೊರಗೆ ಮೈಕೊರೆವ ಚಳಿಯಲ್ಲಿಯೇ ಅನ್ನ-ನೀರು ಇಲ್ಲದೇ ಒಂದೂವರೆ ತಿಂಗಳ ಬಾಣಂತಿ, ಹಸುಗೂಸು ಸೇರಿದಂತೆ ಕುಟುಂಬ ಕಾಲಕಳೆದಿದೆ. ಫೈನಾನ್ಸ್ ಕಂಪನಿ ಅಧಿಕಾರಿ, ಸಿಬ್ಬಂದಿಗೆ ಸ್ವಲ್ಪ ಕಾಲಾವಕಾಶ ನೀಡಿ, ಬಾಣಂತಿ, ಹಸುಗೂಸು ಇದ್ದು, ಮನೆಯ ಒಂದು ಭಾಗದಲ್ಲಿ ಇರಲು ಅವಕಾಶ ನೀಡುವಂತೆ ಕುಟುಂಬ ಕಣ್ಣೀರಿಟ್ಟು ಕೇಳಿದರೂ ಫೈನಾನ್ಸ್ ಕಂಪನಿಯವರ ಮನಸ್ಸು ಕರಗಿಲ್ಲ. ಮನುಷತ್ವ ಮರೆತು ಬಾಣಂತಿ, ಕಂದಮ್ಮ ಸೇರಿದಂತೆ ಕುಟುಂಬದವರನ್ನು ಮನೆಯಿಂದ ಹೊರಹಾಕಿ ಮನೆಗೆ ಬೀಗ ಜಡಿದು ಹೋಗಿದ್ದಾರೆ.
ಚೆನ್ನೈ ಮೂಲದ ಇಕ್ವಿಟಾಸ್ ಸ್ಕಾಲ್ ಫೈನಾನ್ಸ್ ಕಂಪನಿಯಲ್ಲಿ ಎರಡೂವರೆ ವರ್ಷದ ಹಿಂದೆ ಹೈನುಗಾರಿಕೆಗೆಂದು ಶಂಕ್ರಪ್ಪ ಗದ್ದಾಡಿ ಎಂಬ ರೈತ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಹಣ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಕಂತು ತುಂಬದಕ್ಕೆ ಫೈನಾನ್ಸ್ ಸಿಬ್ಬಂದಿ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಸೂಚನೆ ಮೇರೆಗೆ ಫೈನಾನ್ಸ್ ಕಂಪನಿಯವರು ಏಕಾಏಕಿ ಗ್ರಾಮಕ್ಕೆ ಬಂದು ಮನೆಯವರನ್ನು ಹೊರ ಹಾಕಿ, ಮನೆ ಸೀಜ್ ಮಾಡಿ ಬೀಗ ಜಡಿದು ಹೋಗಿದ್ದಾರೆ. ಬೇರೆ ದಾರಿ ಕಾಣದೆ ಮನೆಯ ಹೊರಗೆ ಕುಟುಂಬದವರು ಬಾಣಂತಿ ಜೊತೆ ಮೈ ಕೊರೆವ ಚಳಿಯಲ್ಲಿ ಕಣ್ಣೀರಿಟ್ಟಿದೆ.
PublicNext
07/01/2025 03:39 pm