ಬೆಳಗಾವಿ: ರಾಜ್ಯಾದ್ಯಂತ ಬಾಣಂತಿ, ನವಜಾತ ಶಿಶುಗಳ ಸಾವಿಗೆ ಕಳಪೆ ಔಷಧ, ವೈದ್ಯಕೀಯ ಸಾಮಗ್ರಿಗಳ ಪೂರೈಕೆ, ಭ್ರಷ್ಟಾಚಾರ ಹಾಗೂ ವೈದ್ಯರ ಕೊರತೆಯೇ ಕಾರಣ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ, ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಶುಗಳ ಸರಣಿ ಸಾವಿನ ಹಿನ್ನೆಲೆ ಬಿಜೆಪಿ ಎರಡು ಸತ್ಯಶೋಧನಾ ಸಮಿತಿ ಕಲ್ಯಾಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕವಾಗಿ ಪ್ರವಾಸ ಕೈಗೊಂಡಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾಣಂತಿ, 1,100 ಕ್ಕೂ ಅಧಿಕ ನವಜಾತ ಶಿಶು ಮೃತಪಟ್ಟಿವೆ ಎಂದು ವಾಗ್ದಾಳಿ ನಡೆಸಿದರು.
ವರದಿ ಪ್ರಕಾರ ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧ (ರಿಂಗರ್ ಲ್ಯಾಕ್ವೆಟ್ ದ್ರಾವಣ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಕಾರಣವಾಗಿದೆ. ಗರ್ಭಿಣಿಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ, ಸುರಕ್ಷಿತ ಮಾತೃತ್ವ ಆಶ್ವಾಸನ, ಪ್ರಧಾನಮಂತ್ರಿ ಮಾತೃವಂದನ ಯೋಜನೆ, ಮದರ್ ಆ್ಯಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಡ್, ಪೋಷಣ್ ಅಭಿಯಾನ, ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಬಾಣಂತಿಯರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಮೃತ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಸರ್ಕಾರ ನಿಯಮ ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
PublicNext
07/01/2025 02:20 pm