ಬ್ರಹ್ಮಾವರ: ಯಕ್ಷಗಾನ ಕಲೆಗೆ ಅತ್ಯಗತ್ಯವಾಗಿ ಬೇಕಾಗುವ ಚೆಂಡೆ, ಮದ್ದಳೆ, ತಾಳ ಇತ್ಯಾದಿ ಸಾಧನ ಸಲಕರಣೆ ತಯಾರಿಸುವಲ್ಲಿ ನಿಪುಣರಾದ ವಿಶ್ವಕರ್ಮ ಸಮಾಜದ ಕಲಾವಿದರು ಭಾನುವಾರ ಯಡ್ತಾಡಿಯಲ್ಲಿ ಪ್ರದರ್ಶನ ಕಂಡ "ಹರಿಭಕ್ತ" ಯಕ್ಷಗಾನ ಪ್ರಸಂಗದಲ್ಲಿ ಭಾಗವತಿಕೆ, ಮದ್ದಳೆ, ಚೆಂಡೆ ಮತ್ತು ಮುಖವರ್ಣಿಕೆಯನ್ನು ತಾವೇ ನಿರ್ವಹಿಸಿ ಸಖತ್ ಮಿಂಚಿದರು.
ಭಾನುವಾರ ಯಡ್ತಾಡಿಯಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವದ ಬಳಿಕ ಜರುಗಿದ ಯಕ್ಷಗಾನದಲ್ಲಿ ಸುಧನ್ವ, ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಿ ಯುದ್ಧ ಮಾಡಿ ಸುಧನ್ವ ಮೋಕ್ಷವಾಗುವ ತನಕದ 3 ಗಂಟೆಯ ಪ್ರಸಂಗದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ 15 ಕಲಾವಿದರು ಮತ್ತು ವೇಷಭೂಷಣ ಮಾಡಿದವರೆಲ್ಲರೂ ವಿಶ್ವಕರ್ಮರಾಗಿದ್ದು ಯಕ್ಷಗಾನ ರಂಗದ ಎಲ್ಲ ವಿಭಾಗದಲ್ಲಿಯೂ ತಾವು ನಿಪುಣರು, ಸವ್ಯಸಾಚಿಗಳು ಎಂದು ತೋರಿಸಿಕೊಟ್ಟಿದ್ದಾರೆ.
ಮೇಳದ ಭಾಗವತರಾದ ಗಣೇಶ ಆಚಾರ್ಯ ಬಿಲ್ಲಾಡಿ, ಮದ್ದಳೆಯಲ್ಲಿ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ಚೆಂಡೆಯಲ್ಲಿ ರವಿ ಆಚಾರ್ಯ ಕಾಡೂರು ರಂಗಸ್ಥಳಕ್ಕೆ ಮೆರುಗು ನೀಡಿದರು. ಪ್ರಸಾಧನ ಕಲೆಯಲ್ಲಿ ಗಣೇಶ ಆಚಾರ್ಯ ಸಾಲಿಗ್ರಾಮ ಸಹಕರಿಸಿದರು. ವೇಷಧಾರಿಗಳು ಕೂಡ ಸ್ಥಳೀಯ ವಿಶ್ವಕರ್ಮ ಸಂಘದ ಸದಸ್ಯರಾಗಿದ್ದು, ಪ್ರೇಕ್ಷಕರ ಮನಮುಟ್ಟುವಂತೆ ತಮ್ಮ ಅಭಿನಯ ಪ್ರತಿಭೆಯನ್ನು ತೋರ್ಪಡಿಸಿದರು.
-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ
PublicNext
06/01/2025 10:05 pm