ಚಳ್ಳಕೆರೆ: ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ನಿತ್ಯ ಜೀವನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ಉಚಿತ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಅಂದತ್ವ ನಿವಾರಣಾಧಿಕಾರಿ ಡಾ.ನಾಗರಾಜ್ ಕಿವಿಮಾತು ಹೇಳಿದರು. ನಗರದ ಸರಕಾರಿ ನೌಕರರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದ ವತಿಯಿಂದ ಹಮ್ಮಿಕೊಂಡಿದ್ದ “ಹಿರಿಯ ನಾಗರಿಕರಿಗೆ “ಉಚಿತ ನೇತ್ರ ತಪಾಸಣಾ ಶಿಬಿರ” ಉದ್ಘಾಟಿಸಿ ಮಾತನಾಡಿದರು.
ನೇತ್ರದಾನ ಮಹಾದಾನ ಎನ್ನುವುದಕ್ಕಿಂತಲೂ ದೃಷ್ಠಿದಾನ ಮಹಾದಾನ. ಪ್ರತಿಯೊಬ್ಬರು ದೃಷ್ಠಿದಾನ ಮಾಡಬಹುದು. ಕಣ್ಣಿನ ತೊಂದರೆ ಇರುವ ತಮ್ಮ ನೆರೆ-ಹೊರೆಯ ಹಿರಿಯ ನಾಗರಿಕರನ್ನು ನೇತ್ರ ತಪಾಸಣಾ ಶಿಬಿರಗಳಿಗೆ ಕರೆದುಕೊಂಡು ಬರುವ ಮೂಲಕ ತಾವು ಸಹ ದೃಷ್ಠಿದಾನ ಮಾಡಬಹುದು ಎಂದು ತಿಳಿಸಿದ ಅವರು, ಕಣ್ಣಿನ ತೊಂದರೆ ಇರುವವರು ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
Kshetra Samachara
06/01/2025 05:24 pm