ಹೊಳಲ್ಕೆರೆ: ಕ್ಷೇತ್ರದ ಅಭಿವೃದ್ದಿ ಕಡೆ ರಾಜಕಾರಣಿಗಳಿಗೆ ಕಾಳಜಿಯಿರಬೇಕು. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನಕ್ಕೆ ಒಳ್ಳೆಯ ಕೆಲಸ ಮಾಡಬೇಕೆಂಬುದು ನನ್ನ ಉದ್ದೇಶ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಭರಮಸಾಗರ ಹೋಬಳಿ ಹಿರೇಬೆನ್ನೂರು ಗ್ರಾಮದಲ್ಲಿ 65 ಕೋಟಿ ರೂ.ವೆಚ್ಚದಲ್ಲಿ ಹಿರೇಬೆನ್ನೂರಿನಿಂದ ಸಿರಿಗೆರೆ ಸಾಸಲುವರೆಗೆ 13 ಕಿ.ಮೀ. ನೂತನ ಸಿ.ಸಿ. ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಭರಮಸಾಗರ ಕೆರೆ ಅಭಿವೃದ್ದಿಗೆ ಐದು ಕೋಟಿ ರೂ.ಗಳನ್ನು ನೀಡಿದ್ದೇವೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ. ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದೇನೆ.
ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಐದು ನೂರು ಕೋಟಿ ರೂ.ಗಳನ್ನು ಖರ್ಚು ಮಾಡಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಇನ್ನು ನೂರು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಿರುವುದಿಲ್ಲ. ಭದ್ರಾ ಪ್ರಾಜೆಕ್ಟ್‍ನಿಂದ ಆ.15 ರೊಳಗೆ ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಕ್ಷೇತ್ರಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಮತದಾರರ ಋಣ ತೀರಿಸಬೇಕಾಗಿರುವುದರಿಂದ ಯಾರಿಂದ ಏನನ್ನು ಹೇಳಿಸಿಕೊಳ್ಳದೆ ಎಲ್ಲೆಲ್ಲಿ ಏನೇನು ಅಭಿವೃದ್ದಿ ಕೆಲಸ ಮಾಡಬೇಕೆನ್ನುವುದನ್ನು ಅರಿತು ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದರು.
Kshetra Samachara
06/01/2025 05:14 pm