ಮುಲ್ಕಿ:ಕೊಂಕಣ ರೈಲ್ವೆ ಅಧೀನದ ಮುಲ್ಕಿ ಮತ್ತು ಸುರತ್ಕಲ್ ರೈಲು ನಿಲ್ದಾಣಗಳ ಅಭಿವೃದ್ಧಿಗೆ ತಲಾ 75ಲಕ್ಷ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ನಡೆಯಲಿದೆ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಹೇಳಿದರು.
ಮುಲ್ಕಿ ಪುನರೂರು ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸಾರ್ವಜನಿಕ ಅಹವಾಲು ಸ್ವೀಕರ ಸಂದರ್ಭ ಮುಲ್ಕಿ ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರ ದೂರಿಗೆ ಉತ್ತರಿಸಿದರು.
ಕೊಂಕಣ ರೈಲ್ವೇ ವಿಭಾಗವನ್ನು ಭಾರತೀಯ ರೈಲ್ವೆ ಇಲಾಖೆಯೊಂದಿಗೆ ವಿಲೀನಗೊಳಿಸಲು ಪ್ರಯತ್ನ ಮುಂದುವರಿದಿದೆ. ವಿಲೀನಕ್ಕೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ. ವಿಲೀನ ಪ್ರಕ್ರಿಯೆ ಸಾಧ್ಯವಾದಲ್ಲಿ ಕೊಂಕಣ ರೈಲ್ವೇ ವಿಭಾಗದ ಎಲ್ಲಾ ನಿಲ್ದಾಣಗಳನ್ನು ಮೆಲ್ದರ್ಜೆಗೇರಿಸಲು ಅನುಕೂಲವಾಗುತ್ತದೆ. ಆದಾಗ್ಯೂ ತನ್ನ ಮನವಿಗೆ ಸ್ಪಂದಿಸಿ ಕೊಂಕಣ ರೈಲ್ವೆ ಅನುದಾನ ಬಿಡುಗಡೆಗೊಳಿಸಿದೆ ಎಂದರು.
ಇದೇ ರೀತಿ ಮುಲ್ಕಿಯಲ್ಲಿ ಸಿಎಸ್‌ಟಿ ರೈಲು ನಿಲುಗಡೆಗೆ ಇಲಾಖಾ ಮಟ್ಟದಲ್ಲಿ ಚರ್ಚಿಸುವದಾಗಿ ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಮುಲ್ಕಿಯಿಂದ ಪಡುಪಣಂಬೂರುವರೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಮಂಜೂರಾತಿಗೊಳ್ಳಲಿದೆ. ಆರಂಭಿಕ ಹಂತವಾಗಿ ಮುಲ್ಕಿ ಬಸ್ಸು ನಿಲ್ದಾಣದಿಂದ ಶಾಂಭವಿ ಸೇತುವೆವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಸಂಸದರು ಹೇಳಿದರು.
ಮುಲ್ಕಿ ನಗರದ ಬಲುದೊಡ್ಡ ಸಮಸ್ಯೆಯಾದ ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ ಇಲಾಖಾ ಹಂತದಲ್ಲಿ ಸಮಾಲೋಚನೆ ನಡೆಸಿ ಸೂಕ್ತ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು ಎಂದವರು ಹೇಳಿದರು.
ಹೆಜಮಾಡಿ ಟೋಲ್ ಪ್ಲಾಝಾದಿಂದ ಒಂದು ಕಿಮೀ ಹತ್ತಿರದ ಮೂಲ್ಕಿಯ ವಾಹನಗಳಿಗೆ ವಿನಾಯಿತಿ ದೊರಕಿಸಿಕೊಡುವಂತೆ ಸ್ಥಳೀಯರ ಮನವಿಗೆ ಉತ್ತರಿಸಿದ ಅವರು ಈ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ಟೋಲ್ ಪ್ಲಾಝಾ ಜತೆಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಸ್ಥಳೀಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ವಿಶ್ವಕರ್ಮ ಸಾಲಕ್ಕೆ ಮ್ಯಾನೇಜರ್‌ಗಳು ಕಿರುಕುಳ ನೀಡುತ್ತಿರುವ ಬಗ್ಗೆ ರಂಗನಾಥ್ ಶೆಟ್ಟಿ ಮನವಿ ಸಲ್ಲಿಸಿದರು. ನಗರದ ವಿಜಯಪುರ ಕಾಲನಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಸ್ಥಳೀಯರು ಮನವಿ ಸಲ್ಲಿಸಿದರು.
ಉಡುಪಿ-ಕಾಸರಗೋಡು ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಕೆಯಿಂದ ಸ್ಥಳೀಯ ಕೃಷಿಕರಿಗೆ ಹಾಗೂ ಮನೆಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಸಂಸದರಿಗೆ ಮನವಿ ಸಲ್ಲಿಸಿ ತಡೆ ನೀಡುವಂತೆ ಮನವಿ ಸಲ್ಲಿಸಲಾಯಿತು.
ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ವಿಕಾಸ್ ಶೆಟ್ಟಿ, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಮೂಲ್ಕಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಎನ್.ಪುತ್ರನ್ ಸುನಿಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/01/2025 06:51 pm