ವಿಶೇಷ ವರದಿ ರಹೀಂ ಉಜಿರೆ
ಶಿರ್ವ: ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಈ ರೈಲು ನಿಲ್ದಾಣ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ. ದೂರದ ಮುಂಬೈಗೆ ಹೋಗಬೇಕಾದ್ರೆ ಪಕ್ಕದ ತಾಲೂಕಿನ ರೈಲು ನಿಲ್ದಾಣವನ್ನೇ ಅವಲಂಬಿಸಬೇಕಾದ ಸ್ಥಿತಿ ಈ ಊರಿನ ಜನರದ್ದು.
ಅಂದಹಾಗೆ...ಇನ್ನಂಜೆ ರೈಲು ನಿಲ್ದಾಣ ಕಾಪು ತಾಲೂಕಿನಲ್ಲಿದೆ. ಇನ್ನಂಜೆ ಮಾತ್ರ ಅಲ್ಲ , ಪಡುಬಿದ್ರಿ ರೈಲು ನಿಲ್ದಾಣ ಕೂಡ ಮುಂಬೈಗೆ ಹೋಗುವವರ ಪಾಲಿನ ಕನಸಿನ ನಿಲ್ದಾಣಗಳಾಗಿ ಮಾತ್ರ ಉಳಿದಿವೆ. ಮುಂಬೈ ರೈಲು ನಿಲ್ದಾಣದ ಪಟ್ಟಿಯಲ್ಲಿ ಪಡುಬಿದ್ರಿ ಹಾಗೂ ಇನ್ನಂಜೆ ಇಲ್ಲದಿರುವ ಕಾರಣ ಇಲ್ಲಿ ಸ್ಟಾಪ್ ನೀಡಲಾಗುತ್ತಿಲ್ಲ.
ಮುಂಬೈಗೆ ಪ್ರಯಾಣಿಸಬೇಕಾದರೆ ಇಲ್ಲಿಯ ಜನ ಪಕ್ಕದ ಉಡುಪಿಯ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿ ಟಿಕೆಟ್ ಬುಕ್ ಮಾಡಿಯೇ ಹೋಗಬೇಕಾದ ಸ್ಥಿತಿ ಇದೆ.
ಇನ್ನಂಜೆ ರೈಲು ನಿಲ್ದಾಣ ಕಳೆದ ಐದು ವರ್ಷಗಳ ಹಿಂದೆ ಮೇಲ್ದರ್ಜೆಗೆ ಏರಿದ್ದರೂ ಇನ್ನೂ ಮುಂಬೈ ರೈಲುಗಳಿಗೆ ನಿಲುಗಡೆ ಭಾಗ್ಯ ಸಿಕ್ಕಿಲ್ಲ. ಉಡುಪಿಯ ರೈಲು ನಿಲ್ದಾಣದ ಒತ್ತಡ ಕಡಿಮೆ ಮಾಡಲು ಪಾಸಿಂಗ್ ಸ್ಟೇಷನ್ ಆಗಿ ಇನ್ನಂಜೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು.
ಆದರೆ ಕಾಪು ಭಾಗದ ಜನರಿಗೆ ಅತ್ತ ಪಡುಬಿದ್ರಿ ರೈಲು ನಿಲ್ದಾಣದಲ್ಲೂ ಮುಂಬೈ ರೈಲು ನಿಲುಗಡೆ ಇಲ್ಲ , ಇತ್ತ ಇನ್ನಂಜೆಯಲ್ಲೂ ನಿಲುಗಡೆ ಇಲ್ಲ. ಹೀಗಾಗಿ ಕೊಂಕಣ ರೈಲ್ವೆ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ಕೇಳಿ ಬರುತ್ತಿದೆ.
ದೇಶದ ಅತಿದೊಡ್ಡ ರೈಲ್ವೆ ಎಂಬ ಖ್ಯಾತಿ ಗಳಿಸಿರುವ ಕೊಂಕಣ ರೈಲ್ವೆ ಇನ್ನಾದರೂ ತನ್ನ ಪಟ್ಟಿಯಲ್ಲಿ ಕಾಪು ತಾಲೂಕಿನ ಈ ಎರಡು ರೈಲು ನಿಲ್ದಾಣಗಳ ಹೆಸರನ್ನು ಸೇರ್ಪಡೆ ಮಾಡಬೇಕಿದೆ. ಈ ಮೂಲಕ ಮುಂಬೈನಲ್ಲಿ ನೆಲೆಸಿರುವ ಕಾಪು ಮೂಲದ ನಿವಾಸಿಗಳು ತಮ್ಮೂರಿಗೆ ಬಂದು ಹೋಗಲು ಈ ನಿಲ್ದಾಣ ಸಹಕಾರಿಯಾಗುವುದರ ಜೊತೆಗೆ ಕೊಂಕಣ ರೈಲ್ವೆಗೂ ಆದಾಯ ಗಳಿಸಬಹುದಾಗಿದೆ.
PublicNext
06/01/2025 08:53 pm