ಉಡುಪಿ: ಕಳೆದ 5 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಇಂದ್ರಾಳಿ ಸೇತುವೆ ನಿರ್ಮಾಣಕ್ಕೆ 2025ರ ಜನವರಿ 15ರ ಗಡುವು ನೀಡಲಾಗಿತ್ತು. ಆದರೆ ಈ ದಿನಾಂಕದೊಳಗೆ ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯವಾಗಿದೆ. ಕಾರಣ ಇನ್ನೂ ಗರ್ಡರ್ ಜೋಡಣೆ ಕಾರ್ಯವೇ ಮುಗಿದಿಲ್ಲ. ವೆಲ್ಡಿಂಗ್ ಕಾರ್ಯವೂ ಸಾಕಷ್ಟಿದೆ. ಅನಂತರ ಎಳೆದು ಸೇತುವೆ ಮೇಲೆ ತಂದಿಟ್ಟು ಮಧ್ಯದಲ್ಲಿ ಕಾಂಕ್ರೀಟ್ ರಸ್ತೆ ಮಾಡಬೇಕಿದೆ. ಹೀಗಾಗಿ ಇನ್ನೂ ಕನಿಷ್ಠ 2 ರಿಂದ 3 ತಿಂಗಳಾದರೂ ಬೇಕು.
ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದೇ ಇರುವುದಕ್ಕೆ ಜಿಲ್ಲಾಧಿಕಾರಿಗಳು ಗರಂ ಆಗಿದ್ದಾರೆ. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 2018 ರಲ್ಲಿ ಈ ಸೇತುವೆ ನಿರ್ಮಾಣ ಪ್ರಕ್ರಿಯೆ ಆರಂಭವಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮೊದಲು ಪ್ರಮುಖ ಗುತ್ತಿಗೆದಾರರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಜನವರಿ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರರು ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದರು! ಇದರ ಹೊರತಾಗಿಯೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ಸೇತುವೆ ವಿಳಂಬ ಕಾಮಗಾರಿ ಸಾರ್ವಜನಿಕ ಹೋರಾಟಗಳಿಗೆ ಕಾರಣವಾಗಿದ್ದು ,ಮತ್ತೊಂದು ಸುತ್ತಿನ ಹೋರಾಟಕ್ಕೆ ಸಾರ್ವಜನಿಕರು ಸಜ್ಜಾಗುತ್ತಿದ್ದಾರೆ.
Kshetra Samachara
07/01/2025 03:30 pm