ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಮತ್ತು ಮಂಗಳೂರು ತಾಲೂಕಿನ ಉಳೆಪಾಡಿ ಗ್ರಾಮವನ್ನು ಸಂಪರ್ಕಿಸುವ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಾಣವಾದ ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಸಂಪೂರ್ಣ ಶಿಥಿಲಾವಸ್ಥೆಗೆ ಸರಿದಿದೆ.
ಈ ಸೇತುವೆಗೆ ಹಾಕಿದ ಕಬ್ಬಿಣದ ತಡೆಗೋಡೆ ತುಕ್ಕು ಹಿಡಿದು ಕಿತ್ತು ಹೋಗಿ ನದಿ ಪಾಲಾಗಿದೆ. ಪಕ್ಕದ ಗ್ರಾಮದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಬೇಕಾದರೆ ಇದೇ ಸೇತುವೆಯಲ್ಲಿ ಸಾಗಬೇಕಾಗಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.
50 ವರ್ಷಗಳ ಹಿಂದಿನ ಪುರಾತನ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಇದಾಗಿದ್ದು, ನಿರ್ವಹಣೆ ಇಲ್ಲದೆ ಅಣೆಕಟ್ಟೆಗೆ ಹಾಕಿದ ಮರದ ಹಲಗೆಗಳು ನದಿ ಪಾಲಾಗಿದೆ. ಅಲ್ಲದೆ ಇದೇ ಪರಿಸರದಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಕಿಂಡಿ ಅಣೆಕಟ್ಟುವಿನ ಭಾಗದಲ್ಲಿಯೇ ನಿರಂತರವಾಗಿ ದೋಣಿ ಮುಖಾಂತರ ಮರಳುಗಾರಿಕೆ ನಡೆಯುತ್ತಿದೆ. ಇದರಿಂದ ಅಣೆಕಟ್ಟು ಬುಡದಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿ, ಮರದ ದಿಮ್ಮಿಗಳು ರಾಶಿ ಬಿದ್ದು ಅಣೆಕಟ್ಟು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ.
ಎರಡು ಜಿಲ್ಲೆಯನ್ನು ಸಂಪರ್ಕಿಸುವ ಈ ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಪಕ್ಕದ ಗ್ರಾಮಸ್ಥರಿಗೆ ವರದಾನವಾಗಿದೆ. ಎರಡು ಜಿಲ್ಲೆಗೆ ಸಂಬಂಧಪಟ್ಟಿದ್ದರಿಂದ ಗ್ರಾಮ ಪಂಚಾಯತಿಗಳು ಕೂಡ ನಿರ್ವಹಣೆಗೆ ಹಿಂದೇಟು ಹಾಕುತ್ತಿದೆ. ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ತಕ್ಷಣ ಜನರ ಸಮಸ್ಯೆಗೆ ಸ್ಪಂದಿಸಿ ಹೊಸ ಸೇತುವೆ
ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.
ವರದಿ: ಹರೀಶ್ ಸಚ್ಚರಿಪೇಟೆ, ಪಬ್ಲಿಕ್ ನೆಕ್ಸ್ಟ್, ಕಾರ್ಕಳ
PublicNext
08/01/2025 04:49 pm