ಮಂಗಳೂರು: ಆರು ಮಂದಿ ನಕ್ಸಲರು ಬೆಂಗಳೂರಿನಲ್ಲಿ ಶರಣಾಗತಿ ವಿಚಾರದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಂಗಳೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೈಯಲ್ಲಿ ಬಂದೂಕು ಹಿಡಿದು ಪೊಲೀಸರನ್ನು ಕೊಂದಿರುವ, ನಾಗರಿಕರನ್ನು ಹತ್ಯೆ ಮಾಡಿರುವ ಸಮಾಜ ಘಾತುಕ ಶಕ್ತಿಯಾದ ನಕ್ಸಲರನ್ನು ಸಿಎಂ ಸಿದ್ದರಾಮಯ್ಯ ಗೃಹ ಕಚೇರಿಗೆ ಶರಣಾಗತಿಗೆ ಕರೆಸಿ ರೆಡ್ ಕಾರ್ಪೆಟ್ ಹಾಕುತ್ತಿದ್ದಾರೆ.
ಕಾಡಿನಲ್ಲಿದ್ದ ನಕ್ಸಲರನ್ನು ನಾಡಿಗೆ ಬಂದು ನಕ್ಸಲ್ ಚಟುವಟಿಕೆ ನಡೆಸಲು ಪ್ರೋತ್ಸಾಹ ಕೊಡಲಾಗುತ್ತಿದೆ. ಈ ಮೂಲಕ ಸಿಎಂ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇಂಥವರಿಗೆ ರೆಡ್ ಕಾರ್ಪೆಟ್ ಸ್ವಾಗತ ಮಾಡಿದರೆ ಇನ್ನಷ್ಟು ಮಂದಿ ಪ್ರಚೋದನೆಗೆ ಒಳಪಡುತ್ತಾರೆ. ಇನ್ನಷ್ಟು ಮಂದಿ ಪ್ರಚೋದನೆಗೆ ಒಳಪಡಬೇಕು ಅನ್ನುವ ಉದ್ದೇಶ ಇದರ ಹಿಂದಿದೆಯೇ? ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಉಳಿದವರಿಗೆ ಪ್ರೇರಣೆಯಾಗಲಿ ಎಂದು ಅವರನ್ನು ಸನ್ಮಾನಿಸಲಾಗುತ್ತದೆ. ಆದರೆ ಸಿಎಂ ಇನ್ನಷ್ಟು ಮಂದಿ ನಕ್ಸಲರಿಗೆ ಪ್ರೇರಣೆ ನೀಡುವ ಹಾಗಿದೆ.
ನೀವು ಸರ್ಕಾರವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಂತಿದ್ದಿದ್ದರೆ ಅವರನ್ನು ನ್ಯಾಯಾಲಯದಲ್ಲಿ ಶರಣಾಗತಿ ಮಾಡಿಸಬೇಕಿತ್ತು. ಇದರಲ್ಲೂ ಸಿಎಂ ಪ್ರಸಿದ್ಧಿಯನ್ನು ಪಡೆದುಕೊಳ್ಳಲು ಹೊರಟಿದ್ದಾರೆ. ಕಾಡಿನಲ್ಲಿದ್ದ ನಕ್ಸಲರಿಗೂ ಮತ್ತು ಸಿಎಂಗೂ ಇರುವ ಸಂಬಂಧವೇನು ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆಲ್ಲ ಸಿಎಂ ಉತ್ತರಿಸಲಿ.
ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವ ಸಿಎಂಗೆ ರಾಜ್ಯದಲ್ಲಿ ಕುಗ್ರಾಮಗಳಿವೆ ಅಲ್ಲಿ ಇಂದಿಗೂ ರಸ್ತೆಯಿಲ್ಲ, ಸೇತುವೆಯಿಲ್ಲ, ವಿದ್ಯುತ್ ಸಂಪರ್ಕಗಳಿಲ್ಲ ಇದಕ್ಕೆಲ್ಲಾ ಕಾಂಗ್ರೆಸ್ ಸರಕಾರ ಎಷ್ಟು ಕ್ರಮ ಕೈಗೊಂಡಿದೆ ಎಂದು ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದರು.
PublicNext
08/01/2025 09:55 pm