ಮಂಗಳೂರು: ಇತ್ತೀಚೆಗೆ ಸೈಬರ್ ಫ್ರಾಡ್‌ಗಳನ್ನು ಮಾಡಲು ವಂಚಕರು ಹೊಸಹೊಸ ತಂತ್ರಗಾರಿಕೆ ಮಾಡುತ್ತಿದ್ದಾರೆ. ಅಂತಹ ಹೊಸ ರೀತಿಯ ವಂಚನೆ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿಯೇ ಸಂಸ್ಥೆಯ QR ಕೋಡ್ ಬದಲಿಗೆ ತನ್ನ ವೈಯಕ್ತಿಕ QR ಕೋಡ್ ಬಳಸಿ ಬರೋಬ್ಬರಿ 58ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬಂಗ್ರಕೂಳೂರಿನಲ್ಲಿರುವ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ 15 ವರ್ಷಗಳಿಂದ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಕೃತ್ಯ ಎಸಗಿದ ಆರೋಪಿ. ಈತನು ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆ ಮಾಡಿಕೊಳ್ಳುತ್ತಿದ್ದ. ಆರೋಪಿಯು 2023 ಮಾರ್ಚ್ 1 ರಿಂದ 2023 ಜುಲೈ 31ರವರೆಗೆ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ QR Code ತೆಗೆದು ತನ್ನ ವೈಯಕ್ತಿಕ ಖಾತೆಯ QR Code ಹಾಕಿದ್ದನು.
ಗ್ರಾಹಕರು ಬಂಕ್ ಕ್ಯೂಆರ್ ಕೋಡ್ ಎಂದು ನಂಬಿ “Mohandas Kulur Retail Outlet” ಲಿಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಗೆ ಹಣ ಜಮೆ ಮಾಡುತ್ತಿದ್ದರು. ಹೀಗೆ ಖಾತೆಗೆ ಒಟ್ಟು 58,85,333ರೂ. ಹಣವನ್ನು ವರ್ಗಾಯಿಸಿದ್ದಾನೆ. ಈ ರೀತಿ ಜಮೆ ಮಾಡಿಕೊಂಡು ದ್ರೋಹ ಎಸಗಿದ್ದಾನೆ ಎಂದು ಇದೀಗ ಮಂಗಳೂರು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
PublicNext
08/01/2025 10:00 pm