ಕಾರ್ಕಳ: ಸಿಬಿಐ ಹೆಸರಲ್ಲಿ ಬೆದರಿಸಿ ಕಾರ್ಕಳದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಸಂಭವಿಸಿದೆ. ಪ್ರೀಮ ಶರಿಲ್ ಡಿಸೋಜ (38) ಅವರಿಗೆ ಟೆಲಿಕಾಂ ಕಂಪೆನಿಯಿಂದ ಕರೆ ಮಾಡುವುದಾಗಿ ತಿಳಿಸಿದ ವ್ಯಕ್ತಿಯೊಬ್ಬ ನಿಮ್ಮ ಆಧಾರ್ ಕಾರ್ಡ್ ನಂಬರ್‌ನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುತ್ತದೆ ಎಂದು ಹೆದರಿಸಿದ್ದಾನೆ.
ಈ ಸಂಬಂಧ ಸೈಬರ್ ಅಧಿಕಾರಿ ನಿಮ್ಮ ಜತೆಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ. ವೀಡಿಯೋ ಕಾಲ್ ಮಾಡಿ ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯು ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿ ನೀವು ತನಿಖೆಗೆ ಸಹಕರಿಸಬೇಕು. ಈ ವಿಚಾರವನ್ನು ಯಾರ ಬಳಿಯಲ್ಲಿಯೂ ಹೇಳುವಂತಿಲ್ಲ, ಹೇಳಿದರೆ ನಿಮ್ಮ ಗಂಡ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಬೆದರಿಸಿದ್ದಾನೆ. ಶರಿಲ್ ಅವರ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಿವರ ಪಡೆದುಕೊಂಡು ಹಣವನ್ನು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಬೇಕು , ಇಲ್ಲವಾದರೆ ಅರೆಸ್ಟ್ ವಾರಂಟ್ ಕಳುಹಿಸುತ್ತೇವೆ ಎಂದು ಹೆದರಿಸಲಾಗಿದೆ. ಇದರಿಂದ ಆತಂಕಗೊಂಡ ಮಹಿಳೆ ಫೆಡರಲ್ ಬ್ಯಾಂಕ್‌ನ ಖಾತೆಗೆ 14 ಲಕ್ಷ ರೂ. ಮತ್ತು ಯೆಸ್ ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಹಣವನ್ನು ಎಫ್‌ಡಿ ಖಾತೆಯಿಂದ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/01/2025 06:28 pm