ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಡೆಕೋರೇಷನ್ ಕೆಲಸ ಮಾಡುವ ಕೊಲ್ಕತ್ತಾ ಮೂಲದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ನಿವಾಸಿಗಳಾದ ರಾಹುಲ್ (27), ಅಕ್ಷಯ್ (27), ಗುರುಮೂರ್ತಿ(25),ಸಿಂಚನ್ (19) ಬಂಧಿತ ಆರೋಪಿಗಳು.
ಮಂಗಳೂರು ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಆಗಮಿಸಿದ ನಾಲ್ವರು ಮುಸುಕುಧಾರಿಗಳ ತಂಡ ಕೊಲ್ಕತ್ತಾ ಮೂಲದ ಡೆಕೋರೇಷನ್ ಕಾರ್ಮಿಕರ ಮೇಲೆ ರಾಡ್, ರೀಪುಗಳಿಂದ ಹಲ್ಲೆ ನಡೆಸಿತ್ತು. ಹಲ್ಲೆಯ ಬಳಿಕ ತಂಡ ಪರಾರಿಯಾಗಿತ್ತು. ಡೆಕೋರೇಷನ್ ಕೆಲಸ ಮಾಡುವ ಎರಡು ತಂಡಗಳ ನಡುವಿನ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆಸಲಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಾಳು ಕಾರ್ಮಿಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
PublicNext
08/01/2025 04:00 pm