ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ಅಭ್ಯರ್ಥಿಗಳು ಹಾಗೂ ಅವರ ಕಡೆಯವರಿಂದ ಹಣ ಸಂಗ್ರಹಿಸುತ್ತಿದ್ದ ಮತ್ತೋರ್ವ ಆರೋಪಿಯನ್ನ ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಿಕಂದರ್ ಚೌಧರಿ (44) ಬಂಧಿತ ಆರೋಪಿ.ಗಾಂಧಿನಗರದ ವೈ.ರಾಮಚಂದ್ರ ರಸ್ತೆಯಲ್ಲಿರುವ ಸಜ್ಜನ್ ಲಾಡ್ಜ್‌ನಲ್ಲಿ ತಂಗಿದ್ದ ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಧ್ಯವರ್ತಿಗಳ ಮೂಲಕ ಕೆಎಎಸ್, ಪಿಡಿಓ, ಪಿಎಸ್ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸುತ್ತಿರುವ ಪರೀಕ್ಷಾರ್ಥಿಗಳನ್ನ ಸಂಪರ್ಕಿಸುತ್ತಿದ್ದ ಆರೋಪಿ, ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದಾಗಿ ನಂಬಿಸುತ್ತಿದ್ದ. ಜನವರಿ 2ರಂದು ಗಾಂಧಿನಗರದ ಸಜ್ಜನ್ ಲಾಡ್ಜ್‌ನಲ್ಲಿ ರೂಮ್ ಪಡೆದುಕೊಂಡಿದ್ದ.
ಕೆಲ ಅಭ್ಯರ್ಥಿಗಳು ಮತ್ತು ಅವರ ಕಡೆಯವರನ್ನ ಭೇಟಿಯಾಗುತ್ತಿರುವುದರ ಕುರಿತು ಮಾಹಿತಿ ಕಲೆಹಾಕಿದ್ದ ಉಪ್ಪಾರಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಲಾಗಿದ್ದು, ಆತನ ಜೊತೆ ಸಂಪರ್ಕ ಹೊಂದಿದ್ದವರು ಹಾಗೂ ಭೇಟಿಯಾಗಿದ್ದವರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನ ಪಾಸ್ ಮಾಡಿಸುವುದಾಗಿ ನಂಬಿಸಿ ಹಣ ಗಳಿಸುತ್ತಿದ್ದ ಗೋವಿಂದರಾಜು ಎಂಬಾತನನ್ನ ಡಿಸೆಂಬರ್ 29ರಂದು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದರು.ಮೆಜೆಸ್ಟಿಕ್‌ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೋವಿಂದರಾಜು, ಅಭ್ಯರ್ಥಿಗಳನ್ನ ಸಂಪರ್ಕಿಸಿ ಆರೋಪಿ, 'ತನಗೆ ಪರೀಕ್ಷೆಗೆ ಸಂಬಂಧಿಸಿದಂತಹ ಕೆಲ ಅಧಿಕಾರಿಗಳ ಪರಿಚಯವಿದ್ದು, ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಹುದ್ದೆ ಕೊಡಿಸುವುದಾಗಿ' ನಂಬಿಸಿ ಹಣ ಸಂಗ್ರಹಿಸುತ್ತಿದ್ದ ಎಂದು ತಿಳಿದುಬಂದಿದೆ.
PublicNext
04/01/2025 05:05 pm