ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಬೆಳಗಾವಿ ರಸ್ತೆಯಲ್ಲಿರುವ ಜಮೀನಿನಲ್ಲಿ ಯಾರೋ ಪ್ರತಿಷ್ಠಾಪಿಸಿರುವ ಅಯ್ಯಪ್ಪ ಸ್ವಾಮಿ ಮೂರ್ತಿ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ದಿನೇ ದಿನೇ ಈ ಮೂರ್ತಿ ಪ್ರತಿಷ್ಠಾಪನೆ ವಿಚಾರ ತೀವ್ರ ಸದ್ದು ಮಾಡುತ್ತಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗದಲ್ಲಿ ಯಾರೋ ಅಯ್ಯಪ್ಪ ಸ್ವಾಮಿ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹೋಗಿದ್ದರು. ಈ ವಿಷಯ ಸುದ್ದಿಯಾಗುತ್ತಿದ್ದಂತೆಯೇ ಅನೇಕರು ಅಲ್ಲಿಗೆ ಬಂದು ಕುತೂಹಲದಿಂದ ಅಯ್ಯಪ್ಪನ ಮೂರ್ತಿ ವೀಕ್ಷಿಸಿದರು. ಅಯ್ಯಪ್ಪ ಮಾಲಾಧಾರಿಗಳಂತೂ ನಿತ್ಯ ಅಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.
ಮೊನ್ನೆಯಷ್ಟೇ ಕೃಷಿ ವಿಶ್ವವಿದ್ಯಾಲಯವು ಮೂರ್ತಿ ತೆರವಿಗೆ ಮುಂದಾಗಿತ್ತು. ಆದರೆ, ಅದಕ್ಕೆ ಅಯ್ಯಪ್ಪ ಮಾಲಾಧಾರಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಜೆಸಿಬಿ ವಾಪಸ್ ಹೋಗಿತ್ತು. ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಕೂಡ ನಿನ್ನೆ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ ಮೂರ್ತಿ ತೆರವುಗೊಳಿಸದಂತೆ ಆಗ್ರಹಿಸಿದ್ದರು. ಇದೀಗ ಮತ್ತೆ ಕೃಷಿ ವಿಶ್ವವಿದ್ಯಾಲಯವು ಅಯ್ಯಪ್ಪನ ಮೂರ್ತಿ ಬಳಿ ಯಾರೂ ಬರದಂತೆ ಅದರ ಪಕ್ಕವೇ ದೊಡ್ಡ ಗುಂಡಿ ತೋಡುವ ಕೆಲಸಕ್ಕೆ ಮುಂದಾಗಿತ್ತು.
ಸ್ಥಳಕ್ಕೆ ಜೆಸಿಬಿ ಸಹ ಬಂದು ಗುಂಡಿ ತೋಡುತ್ತಿತ್ತು. ಇದಕ್ಕೆ ಅಯ್ಯಪ್ಪ ಮಾಲಾಧಾರಿಗಳು ಮತ್ತು ಗಂಗಾಧರ ಕುಲಕರ್ಣಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಜೆಸಿಬಿಯನ್ನು ವಾಪಸ್ ಕಳುಹಿಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಬಿ.ಡಿ.ಬಿರಾದಾರ ಜೊತೆ ಸಮಾಲೋಚನೆ ನಡೆಸಿ ಗುಂಡಿ ತೋಡದಂತೆ ಜೆಸಿಬಿ ಅಡ್ಡ ಬಂದು ಗುಂಡಿ ತೋಡುವ ಕೆಲಸ ಬಂದ್ ಮಾಡಿಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾವಿ, ಇನ್‌ಸ್ಪೆಕ್ಟರ್‌ಗಳಾದ ದಯಾನಂದ, ಎಸ್.ಸಿ.ಕಾಡದೇವರಮಠ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು ಕೃಷಿ ವಿಶ್ವವಿದ್ಯಾಲಯದ ಆಸ್ತಿ. ವಿಸಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಸದ್ಯಕ್ಕೆ ಮೂರ್ತಿಯನ್ನು ಮುಟ್ಟುವುದಿಲ್ಲ ಎಂದು ಡೀನ್ ಡಾ.ಬಿ.ಡಿ.ಬಿರಾದಾರ ತಿಳಿಸಿದ್ದು, ಮುಂದೆ ಈ ಅಯ್ಯಪ್ಪ ಮೂರ್ತಿ ಪ್ರತಿಷ್ಠಾಪನೆ ವಿಚಾರ ಯಾವ ಹಂತಕ್ಕೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/01/2025 10:30 pm