ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ1 ಆರೋಪಿ ಬಸವರಾಜ ಮುತ್ತಗಿ ಇದೀಗ ಮಾಫಿ ಸಾಕ್ಷಿ ನುಡಿದಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಬಸವರಾಜ ಮುತ್ತಗಿ ಮಾಫಿ ಸಾಕ್ಷಿ ನುಡಿದಿದ್ದು, ಸುದೀರ್ಘ 30 ಪುಟಗಳ ಮಾಫಿ ಸಾಕ್ಷಿಯನ್ನು ಅವರು ಹೇಳಿದ್ದಾರೆ. ಈ ಮಾಫಿ ಸಾಕ್ಷಿ ಇದೀಗ ಶಾಸಕ ವಿನಯ್ ಕುಲಕರ್ಣಿಗೆ ಉರುಳಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಯೋಗೀಶಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಸಾಕ್ಷಿ ನಾಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಶಾಸಕರೂ ಆಗಿದ್ದಾರೆ.
ಈ ಹಿಂದೆ ವಿನಯ್ ಕುಲಕರ್ಣಿ ಅವರು ಸಚಿವರಾಗಿದ್ದ ವೇಳೆ ಯೋಗೀಶಗೌಡ ಅವರನ್ನು ಹತ್ಯೆ ಮಾಡುವ ಸಂಚನ್ನು ಹೇಗೆ ರೂಪಿಸಿದ್ದರು ಎಂಬ ಎಲ್ಲಾ ಅಂಶಗಳನ್ನು ಇದೀಗ ಮುತ್ತಗಿ ನ್ಯಾಯಾಲಯದ ಎದುರು ಹೇಳಿದ್ದಾರೆ. ಮುತ್ತಗಿ ಅವರನ್ನು ವಿನಯ್ ಕುಲಕರ್ಣಿ ಎರಡೆರಡು ಬಾರಿ ಡೇರಿ ಫಾರ್ಮ್‌ಗೆ ಕರೆಯಿಸಿ ಮೀಟಿಂಗ್ ಮಾಡಿದ್ದು, ಯೋಗೀಶಗೌಡ ಹತ್ಯೆಗೆ ತಂಡ ರೆಡಿ ಮಾಡಿಕೊಳ್ಳುವಂತೆ ಹೇಳಿದ್ದು, ಇದಕ್ಕೆ ಮುತ್ತಗಿ ಒಪ್ಪಿಕೊಳ್ಳದೇ ಇರುವುದು, ಕೊನೆಗೆ ಬೆಂಗಳೂರು ತಂಡವನ್ನು ಯೋಗೀಶಗೌಡರ ಹತ್ಯೆಗೆ ಮುತ್ತಗಿ ಮೂಲಕ ರೆಡಿ ಮಾಡಿಸಿದ್ದು, ಬೆಂಗಳೂರು ತಂಡ 20 ಲಕ್ಷಕ್ಕೆ ಬೇಡಿಕೆ ಇಟ್ಟು, ತಮ್ಮನ್ನು ಬಂಧನ ಮಾಡದಂತೆ ಸೂಚಿಸಿದ್ದು, ಕೊನೆಗೆ ಯೋಗೀಶಗೌಡರನ್ನು ಯಾವ ರೀತಿ ಹತ್ಯೆ ಮಾಡಿಸಲಾಯಿತು ಎಂಬ ಎಲ್ಲಾ ಅಂಶವನ್ನು ಮುತ್ತಗಿ ಎಳೆ ಎಳೆಯಾಗಿ ನ್ಯಾಯಾಲಯದ ಮುಂದೆ ಬಾಯಿ ಬಿಟ್ಟಿದ್ದಾರೆ.
ವಿನಯ್ ಡೇರಿ ಫಾರ್ಮ್‌ನಲ್ಲಿ ಅಂದಿನ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಸೇರಿದಂತೆ ಇತರರಿಗೆ ಭೋಜನ ಕೂಟ ಏರ್ಪಡಿಸಿ ಯೋಗೀಶಗೌಡರ ಕೊಲೆಗೆ ಸಂಚು ರೂಪಿಸಿದ್ದ ವಿಚಾರವನ್ನೂ ಮುತ್ತಗಿ ಸಾಕ್ಷಿ ನುಡಿದಿದ್ದಾರೆ. ಇದೆಲ್ಲವನ್ನೂ ನೋಡಿದರೆ ಪೊಲೀಸರ ಎದುರೇ ಯೋಗೀಶಗೌಡರ ಕೊಲೆಗೆ ಸಂಚು ರೂಪಿಸಲಾಯ್ತಾ ಎಂಬ ಸಂಶಯ ಎದುರಾಗಿದೆ. ಸದ್ಯ ಈ ಎಲ್ಲಾ ಅಂಶವನ್ನು ಮುತ್ತಗಿ ಮಾಫಿ ಸಾಕ್ಷಿ ನುಡಿದಿದ್ದು, ಇದು ವಿನಯ್ ಕುಲಕರ್ಣಿ ಅವರಿಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/01/2025 09:12 am