ಧಾರವಾಡ : ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಜಮೀನಿನಲ್ಲಿ ಯಾರೋ ಅಯ್ಯಪ್ಪ ಸ್ವಾಮಿ ಹಾಗೂ ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಚಾರ ಗೊತ್ತೇ ಇದೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಳೆದ ಎರಡ್ಮೂರು ದಿನಗಳ ಹಿಂದೆ ಬೆಳಗಾವಿ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಜಮೀನಿನಲ್ಲಿ ಯಾರೋ ರಾತ್ರೋರಾತ್ರಿ ಅಯ್ಯಪ್ಪ ಸ್ವಾಮಿ ಹಾಗೂ ನಾಗದೇವತೆ ಮೂರ್ತಿ ಪ್ರತಿಷ್ಠಾಪಿಸಿ ಹೋಗಿದ್ದಾರೆ. ಈ ವಿಷಯ ಗೊತ್ತಾದ ಮೇಲೆ ಸ್ಥಳದಲ್ಲಿ ಅಯ್ಯಪ್ಪ ಮಾಲಾಧಾರಿಗಳೂ ಜಮಾಯಿಸಿದ್ದರು.
ಮೂರ್ತಿಗಳನ್ನು ತೆರವುಗೊಳಿಸಲು ಕೃಷಿ ವಿಶ್ವವಿದ್ಯಾಲಯ ಮುಂದಾಗಿ ಸ್ಥಳಕ್ಕೆ ಜೆಸಿಬಿ ಸಹ ಕಳುಹಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲಾಧಾರಿಗಳು ಹಾಗೂ ಕೆಲ ಸ್ಥಳೀಯರು ಜೆಸಿಬಿಯನ್ನು ವಾಪಸ್ ಕಳುಹಿಸಿದ್ದರು. ಇದು ಒಂದೆಡೆಯಾದರೆ ಇಂದು ಮೂರ್ತಿ ಪ್ರತಿಷ್ಠಾಪನೆಗೊಂಡ ಸ್ಥಳದಲ್ಲಿ ಪೆಂಡಾಲ್ ಹಾಕುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದೇ ಸ್ಥಳದಲ್ಲಿ ಬಿದಿರಿನ ಕಂಬಗಳನ್ನು ಸಹ ತಂದಿಡಲಾಗಿದೆ. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಾವ ಹಂತಕ್ಕೆ ಇದು ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.
Kshetra Samachara
03/01/2025 01:34 pm