ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ. ಈ ಪಾಲಿಕೆಗೆ ತೆರಿಗೆ ಸಂಗ್ರಹ ಮಾಡುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೂರಾರು ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ಬಹುತೇಕ ತೆರಿಗೆದಾರರಿಗೆ ನೋಟಿಸ್ ನೀಡಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಕಠಿಣ ಕ್ರಮಕೈಗೊಂಡಿದ್ದು,2024-25ರ ಸಾಲಿನ ವಾರ್ಷಿಕ ತೆರಿಗೆಯಲ್ಲಿ ಡಿಸೆಂಬರ್ ಮೊದಲ ವಾರದವರೆಗೆ ಒಟ್ಟು 110 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಹೌದು.. ಮಾರ್ಚ್ 2025ರೊಳಗೆ ಇನ್ನೂ 31 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮವಹಿಸಿದ್ದು, ಕೆಲ ತೆರಿಗೆದಾರರಿಗೆ ನೋಟಿಸ್ ಸಹ ಜಾರಿ ಮಾಡಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 82 ವಾರ್ಡ್‌ಗಳಿವೆ. ಇವುಗಳಲ್ಲಿ ಹುಬ್ಬಳ್ಳಿ ವ್ಯಾಪ್ತಿಯಲ್ಲಿ 56, ಧಾರವಾಡದಲ್ಲಿ 26 ವಾರ್ಡ್ ಗಳಿವೆ. ಇವುಗಳಲ್ಲಿ ಅಂದಾಜು 1.81 ಲಕ್ಷ ವಸತಿ ಕಟ್ಟಡಗಳು. 34 ಸಾವಿರ ವಾಣಿಜ್ಯ ಕಟ್ಟಡಗಳು ಹಾಗೂ 1.22 ಲಕ್ಷ ಖಾಲಿ ನಿವೇಶನಗಳಿವೆ. ಇವುಗಳಿಂದ 2025ರ ಮಾರ್ಚ್ ಅಂತ್ಯದವರಿಗೆ ಒಟ್ಟು 141 ಕೋಟಿ ಆಸ್ತಿ ತೆರಿಗೆ ಬರಬೇಕಿದೆ. ಇದರಲ್ಲಿ ಈಗಾಗಲೇ 110 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.
ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಗೆ ಏಪ್ರಿಲ್ ವರೆಗೆ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಬಡ್ಡಿ ಇಲ್ಲದೇ ತೆರಿಗೆ ಪಾವತಿಗೆ ಜೂನ್‌ವರೆಗೂ ಅವಕಾಶ ಕಲ್ಪಿಸಲಾಗಿತ್ತು. ಜುಲೈನಿಂದ ಶೇ 2ರಷ್ಟು ದಂಡ ಸಹಿತ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಈಗಾಗಲೇ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರ ಆಸ್ತಿ, ವಾಣಿಜ್ಯ ಕಟ್ಟಡಗಳ ಬಳಿಯೇ ತೆರಳಿ ತೆರಿಗೆ ಪಾವತಿಸುವಂತೆ ಸೂಚಿಸುತ್ತಿದ್ದಾರೆ. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರ ಆಸ್ತಿ, ಕಚೇರಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಬೀಗ ಹಾಕುವ ಪ್ರಕ್ರಿಯೆಯನ್ನೂ ಕೈಗೊಳ್ಳಲಾಗಿದೆ' ಎಂದು ಮಹಾನಗರ ಪಾಲಿಕೆಯ ಮುಖ್ಯಲೆಕ್ಕಾಧಿಕಾರಿ ಹೇಳುತ್ತಾರೆ.
Kshetra Samachara
02/01/2025 12:39 pm