ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಲವು ಸಿಹಿ, ಕಹಿ ಘಟನೆಗಳಿಗೆ ಸಾಕ್ಷಿಯಾದ 2024

ಧಾರವಾಡ: ಮಂಗಳವಾರ 2024ನೇ ವರ್ಷದ ಕೊನೆಯ ದಿನ. ನಾಳೆ ಬೆಳಿಗ್ಗೆ ಕ್ಯಾಲೆಂಡರ್ ಬದಲಾಗಲಿದೆ. 2024ನೇ ವರ್ಷ ಧಾರವಾಡದ ಅನೇಕ ಸಿಹಿ ಹಾಗೂ ಕಹಿ ಘಟನೆಗಳಿಗೆ ಸಾಕ್ಷಿಯಾಗಿ ನೇಪಥ್ಯಕ್ಕೆ ಸರಿದಿದೆ. ಧಾರವಾಡದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಡೀಟೆಲ್ಸ್ ಇಲ್ಲಿದೆ..

2024ರಲ್ಲಿ ಪ್ರಮುಖವಾಗಿ ಸುದ್ದಿಯಲ್ಲಿ ಇದ್ದು ಗೊಂದಲ ಮೂಡಿಸಿದ್ದು ವಕ್ಫ್‌ ಮಂಡಳಿ ಪ್ರಕರಣ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ಈ ಪ್ರಕರಣ ಸುದ್ದಿ ಮಾಡಿದರೂ ಮರು ದಿನವೇ ಅಕ್ಟೋಬರ್‌ ಕೊನೆ ವಾರದಲ್ಲಿ ಧಾರವಾಡಲ್ಲೂ ವಕ್ಫ್‌ ಮಂಡಳಿ ಅವಾಂತರ ಗೋಚರವಾಯಿತು. ಸಮೀಪದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ರೈತರ ಹೊಲಗಳ ಪಹಣಿಯ 11ನೇ ಕಾಲಂನಲ್ಲಿ ವಕ್ಫ ಮಂಡಳಿ ಹೆಸರು ನಮೂದಾಗಿದ್ದು ಗೊಂದಲಕ್ಕೆ ಕಾರಣವಾಯಿತು. ಇದು ರಾಜ್ಯಮಟ್ಟದಲ್ಲಿ ತೀವ್ರ ಸಂಚಲನ ಮೂಡಿದ ಕಾರಣ ಸರ್ಕಾರದ ನಿರ್ದೇಶನದಂತೆ ವಕ್ಫ ಮಂಡಳಿ ಹೆಸರನ್ನು ಹಂತ ಹಂತವಾಗಿ ತೆಗೆಯಲಾಗುತ್ತಿದೆ.

ಕಿಲ್ಲರ್‌ ಬೈಪಾಸ್‌ ಎಂದೇ ಗುರುತಿಸಿಕೊಂಡಿದ್ದ ಹುಬ್ಬಳ್ಳಿ ಗಬ್ಬೂರ ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ ರಸ್ತೆಯಲ್ಲಿ ಕಳೆದ 25 ವರ್ಷಗಳಿಂದ ಸಂಗ್ರಹಿಸುತ್ತಿದ್ದ ಟೋಲ್‌ ಸಂಗ್ರಹಣೆಯನ್ನು ಸೆಪ್ಟೆಂಬರ್‌ 7ರಿಂದ ನಂದಿ ಹೈವೇ ಕಂಪೆನಿ ಸ್ಥಗಿತಗೊಳಿಸಿತು. ಗುತ್ತಿಗೆ ಸಮಯ ಮುಕ್ತಾಯವಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದು ಬೈಪಾಸ್‌ ಅಗಲೀಕರಣ ಕಾಮಗಾರಿಯೂ ಜೋರಾಗಿ ನಡೆದಿದೆ.

ಪ್ರಜಾಪ್ರಭುತ್ವ ದಿನದ ನಿಮಿತ್ತ ಸಪ್ಟೆಂಬರ್‌ 15ರಂದು ರಾಜ್ಯಾದ್ಯಂತ 2500 ಕಿಲೋ ಮೀಟರ್ ಮಾನವ ಸರಪಳಿ ಮಾಡಲಾಗಿತ್ತು. ಧಾರವಾಡದಲ್ಲೂ 55 ಕಿಲೋ ಮೀಟರ್ ಉದ್ದದ ಸರಪಳಿ ನಿರ್ಮಿಸಲಾಯಿತು. ರಾಜ್ಯದಲ್ಲಿಯೇ ಅತೀ ಹೆಚ್ಚು ಜನರು ನೋಂದಣಿಯಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವೂ ದೊರೆಯಿತು.

ಸೆಪ್ಟೆಂಬರ್‌ ತಿಂಗಳಲ್ಲಿ ಧಾರವಾಡದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಮಾಳಮಡ್ಡಿಯ ಮನೆಯೊಂದರಲ್ಲಿ ಚಂದ್ರಶೇಖರ ಕೊಲ್ಲಾಪುರ ಎಂಬಾತನ ಶವವು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಸಂಚಲನ ಮೂಡಿಸಿತ್ತು. ಆರಂಭದಲ್ಲಿ ಮೃತರು ಅನಾಥ ಎನ್ನಲಾಯಿತು. ಮರು ದಿನವೇ ಅವರ ತಾಯಿ ಹಾಗೂ ಸಂಬಂಧಿಕರು ಪ್ರತ್ಯಕ್ಷರಾದರು. ಆಸ್ತಿ ವಿಚಾರವಾಗಿ ಆವರ ಕೊಲೆಯಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದ್ದು, ಪ್ರಕರಣದ ತನಿಖೆಯನ್ನು ವಿದ್ಯಾಗಿರಿ ಪೊಲೀಸರು ಇನ್ನೂ ನಡೆಸುತ್ತಿದ್ದಾರೆ.

2016ರಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆಯ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ ನವೆಂಬರ್‌ ತಿಂಗಳಲ್ಲಿ ಮಾಫಿ ಸಾಕ್ಷಿಗೆ ಒಪ್ಪಿದ್ದು, ನ್ಯಾಯಾಲಯ ಅದನ್ನು ಸ್ವೀಕರಿಸಿದ್ದು ದೊಡ್ಡ ಬೆಳವಣಿಗೆ. ಜೊತೆಗೆ ಮಾಫಿ ಸಾಕ್ಷಿಗೆ ಒಪ್ಪಿದ್ದರಿಂದ ಪ್ರಕರಣದ 9ನೇ ಆರೋಪಿ ಅಶ್ವತ್‌ ಎಂಬಾತನಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುತ್ತಗಿಗೆ ಸಿಆರ್‌ಪಿಎಫ್ ಬಂದೋಬಸ್ತ್ ಸಹ ಒದಗಿಸಲಾಗಿದೆ.

ಜೂನ್‌ 11ರಂದು ಧಾರವಾಡ ಹಾಲು ಒಕ್ಕೂಟಕ್ಕೆ ನಡೆದ ಚುನಾವಣೆಯಲ್ಲಿ ಶಂಕರ ಮುಗದ ಅವರು ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಎರಡು ವರ್ಷಗಳವರೆಗೆ ಖಾಲಿ ಇದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ಜೂನ್‌ 16ರಂದು ವಿಜಯಪುರ ಮೂಲದ ಸಂಗಮೇಶ ಬಬಲೇಶ್ವರ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಜುಲೈ 21ರಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಿತು. ಪ್ರದೀಪಗೌಡ ಅಧ್ಯಕ್ಷರಾಗಿ ಆಯ್ಕೆಯಾದರು.

ಧಾರವಾಡ, ಕಲಬುರ್ಗಿ ಹೈಕೋರ್ಟ್‌ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್‌ ತಿಂಗಳಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಸ್ತು ಎಂದಿದ್ದು 2024ನೇ ವರ್ಷದಲ್ಲಿ. ಇನ್ನು ಒಂದೂವರೆ ವರ್ಷಗಳ ಕಾಲ ಖಾಲಿ ಇದ್ದ ಧಾರವಾಡ ರಂಗಾಯಣಕ್ಕೆ ನಿರ್ದೇಶಕ ಸ್ಥಾನಕ್ಕೆ ಆಗಸ್ಟ್‌ 12ರಂದು ಕಲಿಯುಗದ ಕುಡುಕ ಖ್ಯಾತಿಯ ರಾಜು ತಾಳಿಕೋಟಿ ಅವರನ್ನು ನೇಮಿಸಲಾಯಿತು.

ಇನ್ನು ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ಈರುಳ್ಳಿ ಬೆಳೆ ನಾಶವಾಗಿತ್ತು. ಅಲ್ಲದೇ ಈ 2024ರಲ್ಲಿ ಧಾರವಾಡ ನಗರದಾದ್ಯಂತ ಅನೇಕ ಅಪಘಾತಗಳು, ಕೊಲೆ ನಡೆದು ಆ ರಕ್ತದ ಕಲೆಯನ್ನು 2024ನೇ ವರ್ಷ ತನ್ನೊಟ್ಟಿಗೆ ತೆಗೆದುಕೊಂಡು ಹೋಗುವಂತಾಗಿದೆ. ಬರುವ 2025ನೇ ವರ್ಷವನ್ನು ಇದೀಗ ಅದ್ಧೂರಿಯಾಗಿ ಸ್ವಾಗತಿಸಲು ಧಾರವಾಡಿಗರು ಕೂಡ ಸಜ್ಜಾಗಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/12/2024 07:05 pm

Cinque Terre

136.43 K

Cinque Terre

1

ಸಂಬಂಧಿತ ಸುದ್ದಿ