ನಂಜನಗೂಡು: 207ನೇ ಭೀಮಾ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ನಂಜನಗೂಡಿನಲ್ಲಿ ಜನಜಾಗೃತಿ ಸಮಾವೇಶವನ್ನು ಇದೇ ಜ.12 ರಂದು ಭಾನುವಾರ ನಂಜನಗೂಡಿನ ಅಂಬೇಡ್ಕರ್ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್ ಹಾಗೂ ಗೌರವಾಧ್ಯಕ್ಷ ಕಾರ್ಯ ಬಸವಣ್ಣ ತಿಳಿಸಿದರು.
ನಂಜನಗೂಡು ನಗರದ ಎಪಿಎಂಸಿ ಆವರಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾವೇಶದ ಅಂಗವಾಗಿ ಜ.01 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ರಂಗಾಯಣದ ಮಾಜಿ ನಿರ್ದೇಶಕರಾದ ಜನಾರ್ದನ್ ಭೀಮಾ ಕೊರೆಗಾಂವ್ ವಿಜಯೋತ್ಸವದ ಜನಜಾಗೃತಿಯ ಸ್ತಬ್ಧ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಪ್ರಚಾರ ರಥವು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಲಿದೆ.
ಬಳಿಕ ಜನವರಿ 12ರಂದು ನಡೆಯುವ ಸಮಾವೇಶದ ಪ್ರಯುಕ್ತ ಅಂದು ಬೆಳಿಗ್ಗೆ 11 ಗಂಟೆಗೆ ಜೂನಿಯರ್ ಕಾಲೇಜು ಮೈದಾನದಿಂದ ಹೊರಡುವ ಮೆರವಣಿಗೆಗೆ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ.
ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಸಾಗಿ ಅಂಬೇಡ್ಕರ್ ಭವನ ತಲುಪಲಿದೆ.
ನಂತರ ನಡೆಯುವ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಟಿವಿ 5 ಸುದ್ದಿ ವಾಹಿನಿಯ ನಿರೂಪಕರು ಹಾಗೂ ಪ್ರಧಾನ ಸಂಪಾದಕರಾದ ರಮಾಕಾಂತ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಪ್ರಗತಿಪರ ಚಿಂತಕರಾದ ಡಾ.ಎಲ್.ಎನ್ ಮುಕುಂದರಾಜ್ ಭಾಗವಹಿಸಲಿದ್ದು, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಅಭಿನಾಗಭೂಷಣ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ ಎಂದು ಕೊರೆಗಾಂವ್ ವಿಜಯೋತ್ಸವ ಹಾಗೂ ಜನ ಜಾಗೃತಿ ಸಮಾವೇಶದ ಬಗ್ಗೆ ವಿವರಿಸಿ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ ಭೀಮಾ ಕೊರೆಗಾಂವ್ ವಿಜಯೋತ್ಸವದ ಜನ ಜಾಗೃತಿ ಸಮಾವೇಶದ ಪೋಸ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ಗೌರವಾಧ್ಯಕ್ಷ ಕಾರ್ಯ ಬಸವಣ್ಣ, ಉಪಾಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಸಂಚಾಲಕ ಮಲ್ಲೇಶ್, ತಾಲ್ಲೂಕು ಸಂಚಾಲಕ ಸುರೇಶ್ ಶಂಕರಪುರ, ಜೈ ಶಂಕರ್, ಯಶ್ವಂತ್ ಕುಮಾರ್, ಪ್ರಶಾಂತ್, ಕಳಲೆ ಕುಮಾರ್, ಮರಿಸ್ವಾಮಿ, ಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/12/2024 02:30 pm