ನಂಜನಗೂಡು: ವಿಧವೆ ಮನೆಗೆ ಮಧ್ಯ ರಾತ್ರಿಯಲ್ಲಿ ನುಗ್ಗಿದ ಕಳ್ಳನೊಬ್ಬ ಕದಿಯುವ ವಿಫಲ ಯತ್ನ ಮಾಡಿ ನಂತರ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹರ್ಷ ಎಂಬಾತನೇ ಕಳ್ಳತನಕ್ಕೆ ಯತ್ನಿಸಿ ಅಸಭ್ಯವಾಗಿ ವರ್ತಿಸಿದ ಯುವಕ. ಸಿಕ್ಕಿಬಿದ್ದ ಯುವಕನನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬೊಕ್ಕಹಳ್ಳಿ ಗ್ರಾಮದ ಮಂಜುಳ ನಾಲ್ಕು ತಿಂಗಳ ಹಿಂದೆ ಪತಿ ಶಿವಕುಮಾರ್ ರನ್ನ ಕಳೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಮೈಸೂರಿನ ಬಿಸಿಎಂ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ಇದ್ದ ಒಂದು ಎಕರೆ ಜಮೀನನ್ನು ಭೋಗ್ಯಕ್ಕೆ ಹಾಕಿದ ಪರಿಣಾಮ ಮನೆಯಲ್ಲಿ 3 ಲಕ್ಷ ನಗದು ಇಟ್ಟುಕೊಂಡಿದ್ದಾರೆ. ಈ ಮಾಹಿತಿ ಅರಿತಿದ್ದ ಹರ್ಷ ಮಧ್ಯ ರಾತ್ರಿ ಮನೆಗೆ ನುಗ್ಗಿದ್ದಾನೆ. ಶಬ್ಧವಾದ ಹಿನ್ನಲೆ ಮಂಗಳ ಎಚ್ಚರಗೊಂಡು ಪರಿಶೀಲಿಸಿದಾಗ ಅತ್ತೆ ಚಿನ್ನಮ್ಮ ಮಲಗಿದ್ದ ಮಂಚದ ಕೆಳಗೆ ಹರ್ಷ ಅವಿತುಕೊಂಡಿರುವುದು ಗೊತ್ತಾಗಿದೆ.
ಯುವಕನನ್ನು ಹಿಡಿದಾಗ ಮಂಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯ ಅಂಗಾಂಗಗಳನ್ನ ಮುಟ್ಟಿ ಪರಾರಿಯಾಗಿದ್ದಾನೆ. ಈ ವಿಚಾರ ಗ್ರಾಮಸ್ಥರಿಗೆ ತಿಳಿಸಿದಾಗ ಹರ್ಷನನ್ನ ಪತ್ತೆ ಹಚ್ಚಿ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ. ಹಣ ಕಳ್ಳತನ ಮಾಡಲು ಮನೆಗೆ ನುಗ್ಗಿದ್ದಾಗಿ ಹರ್ಷ ಒಪ್ಪಿಕೊಂಡಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಹರ್ಷನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
PublicNext
04/01/2025 03:12 pm