ಮೈಸೂರು: ಕೇಕ್ ತಿಂದು 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೋಳನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೀ ಮಂಜುನಾಥ ವಿದ್ಯಾಸಂಸ್ಥೆ ಶಾಲಾ ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೊಸವರ್ಷದ ಅಂಗವಾಗಿ ಜ.1 ರಂದು ಕೇಕ್ ಕಟ್ ಮಾಡಿ ಮಕ್ಕಳಿಗೆ ವಿತರಿಸಿದ್ದಾರೆ. ಉಳಿದದ್ದನ್ನು ಬಿಸಾಡದೆ ಉಳಿಸಿಕೊಂಡಿದ್ದಾರೆ.
ಎರಡು ದಿನವಾಗಿದ್ದ ಕೇಕ್ ನ್ನ ಮಕ್ಕಳು ತಿಂದಿದ್ದಾರೆಂದು ಹೇಳಲಾಗಿದೆ. ಕೇಕ್ ಸೇವಿಸಿದ ನಂತರ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಬೋಳನಹಳ್ಳಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲಿನ ವೈದ್ಯರಾದ ಡಾ.ದ್ರಾಕ್ಷಾಯಿಣಿ ರವರು ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಕ್ಕಳು ಚೇತರಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ರವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಿರ್ಲಕ್ಷ್ಯತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಅಶ್ವತ್ಥ್ ರವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ತರಾಟೆಗೆ ತೆಗೆದುಕೊಂಡಿದ್ದಾರೆ.
PublicNext
04/01/2025 02:27 pm