ನಂಜನಗೂಡು: ಶಾಸಕರು ಮತ್ತು ರೈತರ ಮುಖಾಮುಖಿ ಕಾರ್ಯಕ್ರಮಕ್ಕೆ ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಜ್ಜಾಗಿದೆ. ನಂಜನಗೂಡು ನಗರದ ಎಪಿಎಂಸಿ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘಟನೆಗಳ ಏಕೀಕರಣ ಸಮಿತಿಯ ರಾಜ್ಯ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸ್ವಕ್ಷೇತ್ರದ ನಂಜನಗೂಡಿನ ತಾಂಡವಪುರ ಗ್ರಾಮದಲ್ಲಿ ಜ.23ರಂದು ಜನಪ್ರತಿನಿಧಿಗಳು ಮತ್ತು ರೈತರ ಮುಖಾಮುಖಿ ಎಂಬ ವಿನೂತನ ಕಾರ್ಯಕ್ರಮಕ್ಕೆ ರೈತ ಸಂಘಟನೆ ಮುಂದಾಗಿದ್ದು, ಅಂದು ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ.
ಚಾಮರಾಜನಗರ ಸಂಸದ ಸುನೀಲ್ ಬೋಸ್ ಹಾಗೂ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಹೆಚ್.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಸುತ್ತಮುತ್ತಲಿನ ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳೊಂದಿಗೆ ರೈತರ ಸಭೆ ಆಯೋಜನೆ ಮಾಡಲಾಗಿದೆ.
ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಹಕ್ಕೊತ್ತಾಯ ಮಂಡನೆ, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು, ಬಗರ್ ಹುಕುಂ ಸಾಗುವಳಿ, ದುರಸ್ತಿ ಕಾರ್ಯ, ರೈತರ ಸಾಲ, ವಕ್ಫ್ ಬೋರ್ಡ್ ವಿಚಾರ ಸೇರಿದಂತೆ ರೈತರ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿಗಳ ಜೊತೆ ರೈತರು ಮುಖಮುಖಿಯಾಗಿ ಚರ್ಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಶೈಲಜಾ, ಶಂಕರ ನಾಯಕ, ಮೋಹನ್, ಉಪ್ಪನಹಳ್ಳಿ ದೇವರಾಜ್, ಹಂಬಳೆ ರವಿ ಸೇರಿದಂತೆ ಹಲವರು ರೈತರು ಭಾಗವಹಿಸಿದ್ದರು.
Kshetra Samachara
03/01/2025 04:09 pm