ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಕುಟುಂಬವೊಂದು ಇದೀಗ ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದಿದೆ. ಪಟ್ಟಣದ ಶಾಂತವ್ವ ಗಡ್ಡಿ ಕುಟುಂಬದ ಏಳು ಸದಸ್ಯರು ದಯಾಮರಣಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಶಾಂತವ್ವ ಗಡ್ಡಿ ಮನೆಯಿಲ್ಲದ ಕಾರಣ ಜಿ ಪ್ಲಸ್ ಮನೆಗಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲನೆ ನಡೆಸಿದ ಶಿಗ್ಗಾಂವ್ ಪುರಸಭೆ ೪೦ ಸಾವಿರ ರೂಪಾಯಿ ಭರಿಸಿಕೊಂಡು ಜಿ.ಪ್ಲಸ್ ಮನೆ ನೀಡಿತ್ತು. ಶಾಂತವ್ವ ಗಡ್ಡಿಗೆ ಜಿ.ಪ್ಲಸ್ ಸಂಕೀರ್ಣದ ೯೪ ಸಂಖ್ಯೆಯ ಮನೆ ಹಂಚಿಕೆಯಾಗಿತ್ತು. ಆದರೆ ರವಿವಾರ ರಾತ್ರಿ ಶಿಗ್ಗಾಂವ ಪುರಸಭೆ ಅಧಿಕಾರಿಗಳು ತಮ್ಮನ್ನ ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ್ದಾರೆ ಎಂದು ಶಾಂತವ್ವ ಗಡ್ಡಿ ಆರೋಪಿಸಿದ್ದಾರೆ.
ಆದರೆ ಶಾಂತವ್ವ ಗಡ್ಡಿ ಆರೋಪವನ್ನ ಶಿಗ್ಗಾಂವ್ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ತಳ್ಳಿಹಾಕಿದ್ದಾರೆ. ಶಾಂತವ್ವಳಿಗೆ ಪುರಸಭೆಯಿಂದ ಹಕ್ಕುಪತ್ರ ನೀಡಿಲ್ಲ. ಅವರು ಅನಧಿಕೃತವಾಗಿ ಕೀಲಿ ಮುರಿದು ಜಿ.ಪ್ಲಸ್ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ವಾಸವಾಗಿದ್ದರಿಂದ ಅವರನ್ನ ಮನೆಯಿಂದ ತೆರವು ಮಾಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.
PublicNext
30/12/2024 09:44 pm