ಹಾವೇರಿ : ಜಿಲ್ಲೆಯ ಚಿಕ್ಕಬಸೂರು ಹಾಗೂ ಕುಮ್ಮೂರು ಗ್ರಾಮದ ಕುಸುಮ್ ಬಿ ಯೋಜನೆಯ ಫಲಾನುಭವಿ ರೈತರ ಜಮೀನುಗಳಿಗೆ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.
ಹೆಸ್ಕಾಂನ ಬ್ಯಾಡಗಿ ಉಪವಿಭಾಗದ ಕಾಗಿನೆಲೆ ಸೆಕ್ಷನ್ ವ್ಯಾಪ್ತಿಯ ಚಿಕ್ಕಬಸೂರ ಗ್ರಾಮದ ರುದ್ರಪ್ಪ ಬಡಿಗೇರ ಹಾಗೂ ಕುಮ್ಮೂರು ಗ್ರಾಮದ ರೈತ ರುದ್ರಯ್ಯ ಹಿರೇಮಠ ಅವರ ಜಮೀನಿನಲ್ಲಿ ʼಪಿಎಂ ಕುಸುಮ್ ಬಿʼ ಯೋಜನೆಯಡಿ 7.5 ಎಚ್.ಪಿ ಸಾಮರ್ಥ್ಯದ ಸೋಲಾರ್ ಪಂಪ್‌ಸೆಟ್ ಅಳವಡಿಸಲಾಗಿದೆ. ಈ ರೈತರ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸೋಲಾರ್ ಪಂಪ್‌ಸೆಟ್‌ಗಳ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು.
ರೈತರು ಸೋಲಾರ್ ಪಂಪ್‌ಸೆಟ್ ಮೂಲಕ ತಮ್ಮ ಬೆಳೆಗಳಿಗೆ ನೀರುಣಿಸುತ್ತಿರುವುದಕ್ಕೆ ಜಿಲ್ಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದರು. ಜೊತೆಗೆ ಕುಸುಮ್ ಬಿ ಯೋಜನೆಯನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುತ್ತಿರುವ ಹೆಸ್ಕಾಂ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಯೋಜನೆಯ ಲಾಭ ಪಡೆಯಲಿ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಾವೇರಿ ಎಸ್‌ಇ ನಾಗಪ್ಪ ಎಸ್.ಎಚ್, ರಾಣೆಬೆನ್ನೂರು ವಿಭಾಗದ ಇಇ ಪ್ರಭಾಕರ್ ಎಂ.ಎಸ್, ಬ್ಯಾಡಗಿ ಉಪವಿಭಾಗದ ಎಇಇ ರಾಜು, ಶಾಖಾಧಿಕಾರಿ ಮಾಗೋಡ, ಕುಸುಮ್ ಬಿ ಯೋಜನೆಯ ಫಲಾನುಭವಿ ರೈತರಾದ ರುದ್ರಪ್ಪ ಬಡಿಗೇರ, ರುದ್ರಯ್ಯ ಹಿರೇಮಠ ಸೇರಿದಂತೆ ಹಲವರು ಹಾಜರಿದ್ದರು.
Kshetra Samachara
01/01/2025 06:30 pm