ಉಡುಪಿ:ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಾಸ್ತಾನ ಸುಂಕ ವಸೂಲಾತಿ ಕೇಂದ್ರದ ಸ್ಥಳೀಯ ಜನರ ವಾಹನಗಳಿಗೆ ಈ ಹಿಂದೆ ನೀಡುತ್ತಿದ್ದ ರೀತಿಯಲ್ಲೇ ರಿಯಾಯಿತಿ ಕಲ್ಪಿಸಬೇಕೆಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಗುತ್ತಿಗೆದಾರರಿಗೆ ಸೂಚಿಸಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೋಲ್ ಗಳಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಾಸ್ತಾನ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವು ಸಾಲಿಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದು, ಸ್ಥಳೀಯ ಜನರ ಸುಂಕ ವಸೂಲಾತಿ ಕೇಂದ್ರದ ಸುತ್ತಮುತ್ತ ವಾಸವಿದ್ದು, ದೈನಂದಿನ ಪ್ರತಿಯೊಂದು ಕಾರ್ಯಕ್ಕೂ ಟೋಲ್ ಅನ್ನು ದಾಟುವ ಪ್ರಸಂಗ ಒದಗಿ ಬರುತ್ತಿದೆ.ಪ್ರತಿ ಬಾರಿ ಶುಲ್ಕ ಪಾವತಿ ಮಾಡಲು ಕಷ್ಟವಾಗುತ್ತದೆ. ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ಖಾಸಗಿ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೂ ಟೋಲ್ ಶುಲ್ಕ ವಿನಾಯಿತಿ ನೀಡಬೇಕೆಂದು ತಿಳಿಸಿದರು.ಸಂತಕೆಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ರಸ್ತೆ ಕಾಮಗಾರಿಯನ್ನು ಜನವರಿ 7 ರ ಒಳಗಾಗಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ರಾ.ಹೆ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
Kshetra Samachara
30/12/2024 09:29 pm