ಉಡುಪಿ: ಯುವಜನತೆಗೆ ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಉಡುಪಿ ನಗರದಲ್ಲಿ ಬೃಹತ್ ಕೌಶಲ್ಯ ರೋಜ್‌ಗಾರ್ ಉದ್ಯೋಗ ಮೇಳವೊಂದು ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕೌಶಲ್ಯ ರೋಜ್‌ಗಾರ್ ಮೇಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಯುವಜನರಿಗೆ ಉದ್ಯೋಗವನ್ನು ಒದಗಿಸುವ ಬೃಹತ್ ಉದ್ಯೋಗ ಮೇಳ ಫೆಬ್ರವರಿ ಮೊದಲನೇ ವಾರದಲ್ಲಿ ಉಡುಪಿ ನಗರದ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಈ ಮೇಳದಲ್ಲಿ ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಪ್ರತಿಷ್ಠಿತ ಕಂಪೆನಿಗಳ 100ಕ್ಕೂ ಅಧಿಕ ಉದ್ಯೋಗದಾತರು ಭಾಗವಹಿಸಲಿದ್ದು, 3500ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿ, ಸೌಲಭ್ಯಗಳನ್ನು ಕಲ್ಪಿಸಿ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ನಡೆಯಲಿರುವ ಉದ್ಯೋಗ ಮೇಳದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹಾಗೂ ವೃತ್ತಿಪರ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಹಳೆ ವಿದ್ಯಾರ್ಥಿಗಳಿಗೂ ಸಹ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಬೇಕು ಎಂದ ಜಿಲ್ಲಾಧಿಕಾರಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಾಧ್ಯಮಗಳು ಇದಕ್ಕೆ ಹೆಚ್ಚಿನ ಪ್ರಚಾರ ನೀಡಿ, ಹೆಚ್ಚು ಜನರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಎಂದರು.
Kshetra Samachara
01/01/2025 08:58 pm