ಮಂಗಳೂರು: ಹೊಸ ವರ್ಷಾಚರಣೆಯ ವೇಳೆ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸಿರುವ ಆರೋಪದ ಮೇಲೆ 25 ಮಂದಿಯ ಮೇಲೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ರಾತ್ರಿ ಮಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆಯಕಟ್ಟಿನ ಜಾಗಗಳಲ್ಲಿ ವಾಹನ ತಪಾಸಣೆ ನಡೆಸಲಾಗಿತ್ತು. ಈ ವೇಳೆ 553 ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿದ್ದರು.
ಸಂಚಾರ ಪೂರ್ವ ಠಾಣೆಯ ನಂತೂರು ವೃತ್ತದಲ್ಲಿ 90 ವಾಹನಗಳನ್ನು ತಪಾಸಣೆ ನಡೆಸಲಾಗಿತ್ತು. ಈ ತಪಾಸಣೆಯಲ್ಲಿ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸಿದ್ದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಚಾರ ಪಶ್ಚಿಮ ಠಾಣೆ ವ್ಯಾಪ್ತಿಯ ಕೊಟ್ಟಾರ ಚೌಕಿಯಲ್ಲಿ 40 ವಾಹನಗಳನ್ನು ತಪಾಸಣೆ ನಡೆಸಲಾಗಿತ್ತು. ಇಲ್ಲಿ 1 ಪ್ರಕರಣ ದಾಖಲಾಗಿದೆ. ಕುಂಟಿಕಾನ ಜಂಕ್ಷನ್‌ನಲ್ಲಿ 98 ವಾಹನಗಳನ್ನು ತಪಾಸಣೆ ನಡೆಸಿ 4 ಪ್ರಕರಣ ದಾಖಲಿಸಲಾಗಿತ್ತು. ಸಂಚಾರ ಉತ್ತರ ಠಾಣಾ ವ್ಯಾಪ್ತಿಯ ಬೈಕಂಪಾಡಿ ಜಂಕ್ಷನ್‌ನಲ್ಲಿ 60 ವಾಹನಗಳನ್ನು ತಪಾಸಣೆ ನಡೆಸಿ 5 ಪ್ರಕರಣ ದಾಖಲಾಗಿದೆ. ಕೂಳೂರು ಅಯ್ಯಪ್ಪ ಗುಡಿ ಬಳಿ 60 ವಾಹನಗಳನ್ನು ತಪಾಸಣೆ ನಡೆಸಿ 1 ಪ್ರಕರಣ ದಾಖಲಾಗಿದೆ.
ರೆಡ್ ರಾಕ್ ಮುಕ್ಕದಲ್ಲಿ 110 ವಾಹನಗಳನ್ನು ತಪಾಸಣೆ ನಡೆಸಿ 5 ಪ್ರಕರಣ ದಾಖಲಿಸಲಾಗಿದೆ. ಸಂಚಾರ ದಕ್ಷಿಣ ಠಾಣಾ ವ್ಯಾಪ್ತಿಯ ಪಂಪ್‌ವೆಲ್ ಜಂಕ್ಷನ್‌ನಲ್ಲಿ 50 ವಾಹನಗಳನ್ನು ತಪಾಸಣೆ ನಡೆಸಿ 3 ಪ್ರಕರಣ ದಾಖಲಿಸಲಾಗಿದೆ.
ಪಡೀಲ್ ಜಂಕ್ಷನ್‌ನಲ್ಲಿ 45 ವಾಹನಗಳ ತಪಾಸಣೆ ನಡೆಸಿ 3 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
PublicNext
02/01/2025 07:59 am