ಬೆಂಗಳೂರು: ಐಸಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ ಬೆನ್ನಲ್ಲೇ ರಾಜ್ಯ ಸರ್ಕಾರವು ಅರಣ್ಯ ಇಲಾಖೆಯಲ್ಲಿ ಭಾರೀ ವರ್ಗಾವಣೆಗೆ ಮಾಡಿದೆ. ಇನ್ನು ರಾಜ್ಯದ 23 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದು, ಕೆಲವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಿದ್ದರೆ, ಇನ್ನು ಕೆಲವರಿಗೆ ಹೊಸ ಹುದ್ದೆ ನೀಡಲಾಗಿದೆ.
ಕಾಡಾನೆ ಮಾನವ ಸಂಘರ್ಷದಿಂದ ಸದಾ ಸುದ್ದಿಯಲ್ಲಿರುವ ಹಾಸನ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೋಲಾರದಲ್ಲಿ ಡಿಸಿಎಫ್ ಆಗಿದ್ದ ವಿ.ಏಡುಕೊಂಡಲು ಅವರನ್ನು ನೇಮಿಸಲಾಗಿದೆ. ಅವರಿಗೆ ಬಡ್ತಿ ಕೂಡ ದೊರೆತಿದೆ. ಆದರೆ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮನೋಜ್ ಕುಮಾರ್ ತ್ರಿಪಾಠಿ ಅವರಿಗೆ ಎಪಿಸಿಸಿಎಫ್ ಹುದ್ದೆಗೆ ಬಡ್ತಿ ನೀಡಿ ಅರಣ್ಯ ಇಲಾಖೆ ಭೂದಾಖಲೆಗಳ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಅವರ ವರ್ಗಾವಣೆಯಿಂದ ತೆರವಾದ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಯಾರನ್ನೂ ನಿಯೋಜಿಸಿಲ್ಲ.
ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆ ನಿರ್ದೇಶಕರಾಗಿದ್ದ ಯಶಪಾಲ ಕ್ಷೀರಸಾಗರ್ ಅವರಿಗೆ ಬಡ್ತಿ ನೀಡಿ ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಭದ್ರಾ ಹುಲಿ ಯೋಜನೆ ನಿರ್ದೇಶಕರಾಗಿ ಹಾಸನ ಎಸಿಎಫ್ ಆಗಿದ್ದ ಪುಲಕಿತ್ ಮೀನಾ ಅವರಿಗೆ ಬಡ್ತಿ ನೀಡಿ ನಿಯೋಜನೆ ಮಾಡಲಾಗಿದೆ.
ಚಿಕ್ಕಮಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಉಪೇಂದ್ರ ಪ್ರತಾಪ್ ಸಿಂಗ್ ಅವರಿಗೆ ಎಪಿಸಿಸಿಎಫ್ ಹುದ್ದೆಗೆ ಬಡ್ತಿ ನೀಡಿ ಅವರನ್ನು ಬೆಂಗಳೂರಿನ ಸಾಮಾಜಿಕ ಅರಣ್ಯ ಹಾಗೂ ಯೋಜನೆಗಳ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಕೇಂದ್ರ ಭಾರೀ ಮತ್ತು ಮಧ್ಯ ಕೈಗಾರಿಕೆಗಳ ಸಚಿವರ ಆಪ್ತ ಕಾರ್ಯದರ್ಶಿಯಾಗಿರುವ ತಾಕತ್ ಸಿಂಗ್ ರಾಣಾವತ್ ಅವರಿಗೆ ಸಿಸಿಎಫ್ ಹುದ್ದೆಗೆ ಬಡ್ತಿ ನೀಡಲಾಗಿದೆ.
ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆ ನಿರ್ದೇಶಕರಾಗಿದ್ದ ಯಶಪಾಲ ಕ್ಷೀರಸಾಗರ್ ಅವರಿಗೂ ಸಿಎಫ್ ಹುದ್ದೆಗೆ ಬಡ್ತಿ ನೀಡಿ ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಿಸಲಾಗಿದೆ. ಕೇಂದ್ರ ಸೇವೆಯ ಮೇಲೆ ತೆರಳಿರುವ ಡಿ.ಮಹೇಶ್ ಕುಮಾರ್ ಹಾಗೂ ದೀಪ್ ಕಂಟ್ರಾಕ್ಟರ್ ಅವರಿಗೂ ಸಿಎಫ್ ಹುದ್ದೆಗೆ ಬಡ್ತಿ ನೀಡಲಾಗಿದೆ.
ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿರುವ ಎಸ್.ಪ್ರಭಾಕರನ್ ಅವರಿಗೆ ಸಿಎಫ್ ಹುದ್ದೆಗೆ ಬಡ್ತಿ ನೀಡಿ ಬಂಡೀಪುರದಲ್ಲಿಯೇ ಮುಂದುವರಿಸಲಾಗಿದೆ. ಚಿಕ್ಕಮಗಳೂರು ಕಾರ್ಯಯೋಜನೆ ಡಿಸಿಎಫ್ ಆಗಿದ್ದ ಸೋನಾಲ್ ವೃಷ್ಣಿ ಅವರಿಗೆ ಸಿಎಫ್ ಹುದ್ದೆಗೆ ಬಡ್ತಿ ನೀಡಿ ಅಲ್ಲಿಯೇ ಮುಂದುವರಿಸಲಾಗಿದೆ.
ಬೀದರ್ ಡಿಸಿಎಫ್ ಎಂ.ಎಂ.ವಾನತಿ, ಬೆಳಗಾವಿ ಡಿಸಿಎಫ್ ಮಾರಿಯಾ ಕ್ರಿಸ್ಟು ರಾಜಾ, ಕುಂದಾಪುರ ಡಿಸಿಎಫ್ ಕೆ.ಗಣಪತಿ, ಸಾಗರ ಡಿಸಿಎಫ್ ಡಿ.ಮೋಹನಕುಮಾರ್, ಭದ್ರಾವತಿ ಡಿಸಿಎಫ್ ಎಂ.ವಿ.ಆಶಿಶ್ ರೆಡ್ಡಿ, ವಿಜಯನಗರ ಡಿಸಿಎಫ್ ಅರಸಾಳನ್, ಶಿರಸಿ ಡಿಸಿಎಫ್ ಡಾ.ಜಿ.ಆರ್. ಅಜ್ಜಯ್ಯ, ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಸಂತೋಷ್ ಕುಮಾರ್, ಶಿವಮೊಗ್ಗ ಡಿಸಿಎಫ್ ಇ.ಶಿವಶಂಕರ್, ಚಿತ್ರದುರ್ಗ ಡಿಸಿಎಫ್ ಟಿ.ರಾಜಣ್ಣ ಅವರಿಗೆ ಬಡ್ತಿಯೊಂದಿಗೆ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಬನ್ನೇರಘಟ್ಟ ಡಿಸಿಎಫ್ ಆಗಿದ್ದ ಪ್ರಭಾಕರ ಪ್ರಿಯದರ್ಶಿ ಅವರನ್ನು ಯಾದಗಿರಿ ಡಿಸಿಎಫ್ ಆಗಿ ವರ್ಗಮಾಡಿದ್ದರೆ, ಅಲ್ಲಿ ಡಿಸಿಎಫ್ ಆಗಿದ್ದ ಕಾಜೋಲ್ ಅಜಿತ್ ಪಾಟೀಲ್ ಅವರನ್ನು ಬೆಂಗಳೂರು ಬನ್ನೇರಘಟ್ಟಕ್ಕೆ ವರ್ಗ ಮಾಡಲಾಗಿದೆ. ಎಚ್ ಡಿಕೋಟೆಯಲ್ಲಿ ಎಸಿಎಫ್ ಆಗಿದ್ದ ಅಭಿಷೇಕ್ ವಿ ಅವರಿಗೆ ಡಿಸಿಎಫ್ ಹುದ್ದೆಗೆ ಬಡ್ತಿ ನೀಡಿ ಬೆಂಗಳೂರು ಕಾಡುಗೋಡಿ ಅರಣ್ಯ ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಹಾಸನ ಎಸಿಎಫ್ ಆಗಿದ್ದ ಪುಲ್ಕಿತ್ ಮೀನಾ ಅವರಿಗೆ ಡಿಸಿಎಫ್ ಹುದ್ದೆಗೆ ಬಡ್ತಿ ನೀಡಿ ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆ ನಿರ್ದೇಶಕರಾಗಿ ನೇಮಿಸಲಾಗಿದೆ.
PublicNext
02/01/2025 03:30 pm