ಉಡುಪಿ: ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳೇ ಇಲ್ಲದ ಕಾರಣ ಪಂಚಾಯತ್ ಬಾಗಿಲು ಮುಚ್ಚಿದ ಅಪರೂಪದ ಪ್ರಸಂಗ ನಡೆದಿದೆ.
ಇಲ್ಲಿನ ಪಂಚಾಯತ್ ಸಿಬ್ಬಂದಿಗಳು ಡಿಸೆಂಬರ್ 19 ರಂದು "ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿದ್ದು ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇವೆ" ಎಂದು ಪತ್ರವನ್ನು ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮೇಲಾಧಿಕಾರಿಗಳಿಗೆ ಪತ್ರ ಮೂಲಕ ಮಾಹಿತಿ ನೀಡಿದ್ದರು. ಆದರೆ, ಈ ತನಕ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯತ್ ಕಚೇರಿಗೆ ಯಾವುದೇ ಸಿಬ್ಬಂದಿಗಳು ಹಾಜರಾಗಿಲ್ಲ !
ಸಿಬ್ಬಂದಿಗಳ ರಾಜೀನಾಮೆ ವಿಷಯ ತಿಳಿಯದೆ ತಮ್ಮ ಕೆಲಸಕ್ಕಾಗಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಸಾರ್ವಜನಿಕರು ಬಾಗಿಲಿಗೆ ಬೀಗ ಹಾಕಿರುವುದು ಕಂಡು ವಾಪಸ್ ಹೋಗುವಂತಾಗಿದೆ. ಯಾವುದೇ ಮಾಹಿತಿ ನೀಡದೆ ಗ್ರಾಮ ಪಂಚಾಯತ್ ಬಾಗಿಲು ತೆರೆಯದೆ ಇರುವುದಕ್ಕೆ ಸಾರ್ವಜನಿಕರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
01/01/2025 08:04 pm